ಬೆಂಗಳೂರು: ಇಂಗ್ಲೆಂಡ್ ವಿರುದ್ಧ 2016ರಲ್ಲಿ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಭರವಸೆ ಮೂಡಿಸಿದ್ದ ಕರುಣ್ ನಾಯರ್ ಬಳಿಕ ರಾಷ್ಟ್ರೀಯ ತಂಡದಲ್ಲಿ ಸರಿಯಾದ ಅವಕಾಶ ಸಿಗದೆ ಸುಮಾರು ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ಕರುಣ್ ನಾಯರ್ ಟ್ವೀಟ್ ಮಾಡಿದ್ದು “ಪ್ರೀತಿಯ ಕ್ರಿಕೆಟ್, ನನಗೆ ಇನ್ನೂ ಒಂದು ಅವಕಾಶ ನೀಡಿ” ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಕೇವಲ ಎರಡನೇ ಭಾರತೀಯ ಆಟಗಾರ ಎಂಬ ಖ್ಯಾತಿಯ ಕರುಣ್ ನಾಯರ್ ಈ ಟ್ವೀಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್‌ನಲ್ಲಿ ಸರಿಯಾದ ಅವಕಾಶ ಸಿಗದ ಕಾರಣದಿಂದ ಅವರು ಬೇಸರದಿಂದ ಈ ಟ್ವೀಟ್ ಮಾಡಿದಂತಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದ್ದರು. ಈ ಮೂಲಕ ವೀರೆಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
ಆದರೆ ಇದಾದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.
ದೇಶೀಯ ಕ್ರಿಕೆಟ್ನಲ್ಲಿಯೂ ಫಾರ್ಮ್ ಕಳೆದುಕೊಂಡ ಕರುಣ್
ಇತ್ತೀಚಿನ ವರ್ಷಗಳಲ್ಲಿ ಐಪಿಎಲ್, ದೇಶೀಯ ಕ್ರಿಕೆಟ್ನಲ್ಲಿಯೂ ಕರುಣ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ರಾಷ್ಟ್ರೀಯ ತಂಡದಿಂದ ಹೊರಬಿದ್ದರೂ ಕರುಣ್ ನಾಯರ್ ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡದ ಅವಿಭಾಜ್ಯ ಭಾಗವಾಗಿದ್ದರು. ಆದರೆ ಇತ್ತೀಚೆಗೆ ಇಲ್ಲಿಯೂ ಕೂಡ ಅವರ ಪ್ರದರ್ಶನ ಮಂಕಾಗಿದೆ. ಇದೇ ಕಾರಣದಿಂದ ಕಳೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಆದರೂ ರಣಜಿ ಟೂರ್ನಿಯ ಸಂಭಾವ್ಯ ತಂಡದಲ್ಲಿ ಕರುಣ್ಗೆ ಅವಕಾಶ ನೀಡಲಾಗಿತ್ತು. ಆದರೆ ಶನಿವಾರದಂದು ಪ್ರಕಟಿಸಿದ ರಣಜಿ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಅವರ ಹೆಸರನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಕರುಣ್ ನಾಯರ್ ಟ್ವೀಟ್ ಮಾಡಿದ್ದು, ಪ್ರೀತಿಯ ಕ್ರಿಕೆಟ್, ನನಗೆ ಇನ್ನೂ ಒಂದು ಅವಕಾಶ ನೀಡಿ.” ಎಂದು ಹೇಳಿದ್ದಾರೆ.
ಕರುಣ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 6 ಟೆಸ್ಟ್ ಮತ್ತು 2 ಏಕ ದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ತ್ರಿಶತಕ ಸೇರಿದಂತೆ ಒಟ್ಟು 374 ರನ್ ಗಳಿಸಿದ್ದಾರೆ. ಇದರ ಜತೆಗೆ ಏಕ ದಿನ ಕ್ರಿಕೆಟ್‌ನಲ್ಲಿ 2 ಪಂದ್ಯಗಳಲ್ಲಿ 46 ರನ್ ಗಳಿಸಿದ್ದಾರೆ. ಜೂನ್ 2016 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಇದಾಗ ಬಳಿಕ ಅವರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ | INDvsBAN | ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರ, ಬಾಂಗ್ಲಾದೇಶ ವಿರುದ್ಧ 227 ರನ್‌ಗಳ ಭರ್ಜರಿ ಜಯ