Site icon Vistara News

Karun Nair: ತ್ರಿಶತಕ ಬಾರಿಸಿದರೂ ಭಾರತ ತಂಡದಲ್ಲಿ ಕಡೆಗಣನೆ; ಕೌಂಟಿಯಲ್ಲಿ ದ್ವಿಶತಕ ಬಾರಿಸಿದ ಕರುಣ್ ನಾಯರ್

Karun Nair

ಲಂಡನ್​: ಇಂಗ್ಲೆಂಡ್​ ವಿರುದ್ಧ 2016ರಲ್ಲಿ ಚೆನ್ನೈನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಭರವಸೆ ಮೂಡಿಸಿದ್ದ ಕರುಣ್​ ನಾಯರ್​ ಬಳಿಕ ರಾಷ್ಟ್ರೀಯ ತಂಡದಲ್ಲಿ ಸರಿಯಾದ ಅವಕಾಶ ಸಿಗದೆ ಸುಮಾರು ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ ಅವರನ್ನು ಟೀಮ್​ ಇಂಡಿಯಾ ಕಡೆಗಣಿಸುತ್ತಲೇ ಬಂದಿತ್ತು. ಇದೀಗ ಕರುಣ್​ ನಾಯರ್(Karun Nair)​ ಕೌಂಟಿ ಕ್ರಿಕೆಟ್​ನಲ್ಲಿ(County Championship) ದ್ವಿಶತಕ ಬಾರಿಸಿ ಮಿಂಚಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ ತ್ರಿಶತಕ ಬಾರಿಸಿದ್ದರು. ಈ ಮೂಲಕ ವೀರೆಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇದಾದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಕಳೆದ ವರ್ಷ ಪ್ರೀತಿಯ ಕ್ರಿಕೆಟ್, ನನಗೆ ಇನ್ನೂ ಒಂದು ಅವಕಾಶ ನೀಡಿ.” ಎಂದು ಕರುಣ್​ ಟ್ವೀಟ್​ ಮೂಲಕ ಕೇಳಿಕೊಂಡಿದ್ದರು. ಆದರೂ ಕೂಡ ಅವರಿಗೆ ಅವಕಾಶ ಸಿಗಲಿಲ್ಲ. ದೇಶೀಯ ಕ್ರಿಕೆಟ್​ನಲ್ಲಿಯೂ ಕರ್ನಾಟಕ ತಂಡದ ಪರ ಸರಿಯಾದ ಅವಕಾಶ ಸಿಗದೇ ಇದ್ದ ಹಿನ್ನೆಲೆ ಅವರು ರಾಜ್ಯ ತಂಡ ತೊರೆದು ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2023-24ನೇ ಸಾಲಿನ ರಣಜಿಯಲ್ಲಿ ವಿದರ್ಭ ಪರ ಉತ್ತಮ ಬ್ಯಾಟಿಂಗ್​ ಪ್ರದರ್ಶನವನ್ನೂ ತೋರಿದ್ದರು.

ಕೌಂಟಿ ಚಾಂಪಿಯನ್‌ಶಿಪ್​ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಕರುಣ್, ಗ್ಲಾಮೋರ್ಗನ್ ತಂಡದ ವಿರುದ್ಧ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. 253 ಎಸೆತಗಳನ್ನು ಎದುರಿಸಿ ಅಜೇಯ 202 ರನ್ ಗಳಿಸಿದರು. ನಾಯರ್ ಅವರ ಈ ಅಮೋಘ ಆಟದಿಂದಾಗಿ ನಾರ್ಥಾಂಪ್ಟನ್‌ಶೈರ್ ತಂಡ 334 ರನ್‌ಗಳಿಸಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 6 ವಿಕೆಟ್‌ಗೆ 605 ರನ್ ಗಳಿಸಿದೆ.

32 ವರ್ಷದ ಕರುಣ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 6 ಟೆಸ್ಟ್ ಮತ್ತು 2 ಏಕ ದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ತ್ರಿಶತಕ ಸೇರಿದಂತೆ ಒಟ್ಟು 374 ರನ್ ಗಳಿಸಿದ್ದಾರೆ. ಇದರ ಜತೆಗೆ ಏಕ ದಿನ ಕ್ರಿಕೆಟ್‌ನಲ್ಲಿ 2 ಪಂದ್ಯಗಳಲ್ಲಿ 46 ರನ್ ಗಳಿಸಿದ್ದಾರೆ. ಜೂನ್ 2016 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಇದಾಗ ಬಳಿಕ ಅವರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ IPL 2024 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್​

ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ

ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 49.75 ಸರಾಸರಿಯಲ್ಲಿ 19 ಶತಕ ಮತ್ತು 32 ಅರ್ಧ ಶತಕಗಳೊಂದಿಗೆ 7164 ರನ್ ಗಳಿಸಿದ್ದಾರೆ. 101 ಲಿಸ್ಟ್ ‘ಎ’ ಪಂದ್ಯಗಳಲ್ಲಿ 3 ಶತಕ ಮತ್ತು 13 ಅರ್ಧಶತಕಗಳೊಂದಿಗೆ 2349 ರನ್ ಗಳಿಸಿದ್ದಾರೆ. 157 ಟಿ20 ಪಂದ್ಯಗಳಲ್ಲಿ ಅವರು 2 ಶತಕ ಮತ್ತು 18 ಅರ್ಧ ಶತಕಗಳ ಜತೆಗೆ 132.41 ಸ್ಟ್ರೈಕ್ ರೇಟ್‌ನಲ್ಲಿ 3207 ರನ್ ಗಳಿಸಿದ್ದಾರೆ.

Exit mobile version