ಮುಂಬಯಿ: ಅಕ್ಟೋಬರ್-ನವೆಂಬರ್ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ನಲ್ಲಿ (World Cup 2023) ಕಾಶ್ಮೀರದ ಮರಗಳಿಂದ ತಯಾರಿಸಿದ ಬ್ಯಾಟ್ಗಳನ್ನು ಬಳಸಲಾಗುತ್ತದೆ. ಇದೇ ಮೊದಲ ಬಾರಿಗೆ ವಿಶ್ವ ಕಪ್ನಲ್ಲಿ ಕ್ರಿಕೆಟ್ನ ತವರೂರು ಇಂಗ್ಲೆಂಡ್ನ ಮರದ ಬ್ಯಾಟ್ಗಳನ್ನು ಹೊರತುಪಡಿಸಿ ಭಾರತದ ಮರದ ಬ್ಯಾಟ್ಗಳನ್ನು ಬಳಸಲಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಸೇರಿದಂತೆ ಆರು ರಾಷ್ಟ್ರಗಳ ಕ್ರಿಕೆಟಿಗರು ವಿಶ್ವ ಕಪ್ ಪಂದ್ಯಗಳಲ್ಲಿ ಸಾಂಪ್ರದಾಯಿಕ ಇಂಗ್ಲೆಂಡ್ನ ಮರದ ಬ್ಯಾಟ್ ಬದಲಿಗೆ ಕಾಶ್ಮೀರ ಮರವನ್ನು ಬಳಸುವ ನಿರೀಕ್ಷೆಯಿದೆ.
ಕಾಶ್ಮೀರದ ಕ್ರಿಕೆಟ್ ಬ್ಯಾಟ್ ಉತ್ಪಾದನಾ ಸಂಘದ ಅಧ್ಯಕ್ಷ ಫಯಾಜ್ ಅಹ್ಮದ್ ದಾರ್, ಭಾರತದಲ್ಲಿ ನಡೆಯಲಿರುವ ಮೆಗಾ ಏಕದಿನ ಪಂದ್ಯಾವಳಿಯಲ್ಲಿ ಕಾಶ್ಮೀರ ವಿಲ್ಲೋ ಬ್ಯಾಟ್ಗಳು ಮೋಡಿ ಮಾಡಲಿವೆ ಎಂಬುದನ್ನು ದೃಢಪಡಿಸಿದ್ದಾರೆ. ಏಕೆಂದರೆ ಕೆಲವು ಅಂತರರಾಷ್ಟ್ರೀಯ ಆಟಗಾರರು ಇಂಗ್ಲಿಷ್ ವಿಲ್ಲೋ ಬದಲಿಗೆ ಈ ಬ್ಯಾಟ್ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದ ಮರದ ಬ್ಯಾಟ್ಗಳನ್ನು ಬಳಸುವ ಮೂಲಕ ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಇನ್ ಜಮ್ಮು ಕಾಶ್ಮೀರ ‘ ಅಭಿಯಾನಗಳಿಗೆ ಪೂರಕ. ಕಾಶ್ಮೀರವು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಬ್ಯಾಟ್ಗಳನ್ನು ಉತ್ಪಾದಿಸುತ್ತಿದೆ. ಆದಾಗ್ಯೂ, ಇಲ್ಲಿಯವರೆಗೆ ವಿಶ್ವ ಕಪ್ ಕ್ರಿಕೆಟ್ನಲ್ಲಿ ಪ್ರಾಮುಖ್ಯತೆ ಕಂಡುಕೊಂಡಿಲ್ಲ.
ಕಾಶ್ಮೀರ ಮರದ ಬ್ಯಾಟ್ ಅನ್ನು ಮಾರುಕಟ್ಟೆ ಮತ್ತು ಬ್ರಾಂಡ್ ಮಾಡುವವರಲ್ಲಿ ಒಬ್ಬರಾದ ಫೌಜುಲ್ ಕಬೀರ್ ಮುಂಬರುವ ಐಸಿಸಿ ಏಕದಿನ ವಿಶ್ವ ಕಪ್ನಲ್ಲಿ ಇತರ ದೇಶಗಳ ಇಲ್ಲಿನ ಬ್ಯಾಟ್ಗಳನ್ನು ಬಳಸುತ್ತಾರೆ ಎಂದು ಸಂತೋಷಪಟ್ಟರು.
ಕಳೆದ ಎರಡು ಟಿ 20 ವಿಶ್ವ ಕಪ್ಗಳಲ್ಲಿ ಕೆಲವು ಆಟಗಾರರು ಕಾಶ್ಮೀರ ಮರದ ಬ್ಯಾಟ್ ಬಳಸಿದ್ದಾರೆ. ಇದೀಗ 50 ಓವರ್ಗಳ ವಿಶ್ವಕಪ್ಗೆ ಪದಾರ್ಪಣೆ ಮಾಡಲಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್, ಯುಎಇ ಮತ್ತು ಒಮನ್ನ ಆಟಗಾರರು ನಮ್ಮ ಬ್ಯಾಟ್ನಲ್ಲಿ ಆಡಲಿದ್ದಾರೆ ಎಂದು ಫೌಜುಲು ಹೇಳಿದ್ದಾರೆ.
ಏನಿದರ ವಿಶೇಷತೆ?
ಕ್ರಿಕೆಟ್ ಬ್ಯಾಟ್ಗಳನ್ನು ತಯಾರಿಸಲು ಸಾಮಾನ್ಯವಾಗಿ ಎರಡು ರೀತಿಯ ಮರಗಳನ್ನು ಬಳಸಲಾಗುತ್ತದೆ. ಕಾಶ್ಮೀರ ವಿಲ್ಲೋ ಮತ್ತು ಇಂಗ್ಲೆಂಡ್ ವಿಲ್ಲೋ. ಕ್ರಿಕೆಟ್ ಬ್ಯಾಟ್ ತಯಾರಿಯಲ್ಲಿ ಮರದ ಆಯ್ಕೆ ಪ್ರಮುಖ ವಿಷಯ. ಇದು ಬ್ಯಾಟ್ ಗೆ ಬಲ ಮತ್ತು ಬಳುಕುವಿಕೆಯನ್ನು ನೀಡುತ್ತದೆ. ಈ ಎರಡೂ ರೀತಿಯ ಮರಗಳ ಕಾರ್ಯಕ್ಷಮತೆಯ ನಡುವೆ ಭಾರಿ ವ್ಯತ್ಯಾಸಗಳಿವೆ. ಇಂಗ್ಲಿಷ್ ಮರವನ್ನು ಇಂಗ್ಲೆಂಡ್ನಲ್ಲಿ ಬೆಳೆಯಲಾಗುತ್ತದೆ. ಆದರೆ ಕಾಶ್ಮೀರ ವಿಲ್ಲೊವನ್ನು ಕಾಶ್ಮೀರದ ಉತ್ತರ ಭಾಗದಲ್ಲಿ ಬೆಳೆಯಲಾಗುತ್ತದೆ. ಇಂಗ್ಲಿಷ್ ವಿಲ್ಲೋ ಬಿಳಿ ಬಣ್ಣದ್ದಾಗಿದ್ದರೆ, ಕಾಶ್ಮೀರ ವಿಲ್ಲೋ ಕಂದು ಬಣ್ಣದ್ದಾಗಿರುತ್ತದೆ. ಕಾಶ್ಮೀರ ವಿಲ್ಲೋ ಬ್ಯಾಟ್ಗಳು ಇಂಗ್ಲಿಷ್ ವಿಲ್ಲೋ ಬ್ಯಾಟ್ಗಳಿಗಿಂತ ಭಾರ. ಆದರೆ ಬೆಲೆಯ ವಿಚಾರಕ್ಕೆ ಬಂದಾಗ ಅಗ್ಗ.