Site icon Vistara News

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌

Katherine Sciver-Brunt retires

ಲಂಡನ್​: ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್​ ತಂಡದ ಅನುಭವಿ ವೇಗಿ ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌(Katherine Sciver-Brunt) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಆದರೆ ದಿ ಹಂಡ್ರೆಡ್‌ ಟೂರ್ನಿಯಲ್ಲಿ ಇನ್ನೂ ಒಂದು ಆವೃತ್ತಿಯಲ್ಲಿ ಆಡುವ ಯೋಜನೆ ಹಾಕಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ವಿಚಾರವನ್ನು ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದ್ದಾರೆ. “19 ವರ್ಷಗಳಿಂದ ಇಂಗ್ಲೆಂಡ್‌ ತಂಡದ ಭಾಗವಾಗಿದ್ದಕ್ಕೆ ನನಗೆ ಅಪಾರ ಸಂತಸವಿದೆ. ಇದೊಂದು ಸುದೀರ್ಘ‌ ಪಯಣ. ನನ್ನ ಕ್ರಿಕೆಟ್​ ವೃತ್ತಿಜೀವನದಲ್ಲಿ ಹಲವಾರು ಏರಿಳಿತಗಳು ಕಂಡಿದ್ದೇನೆ. ಕಷ್ಟದ ಕಾಲದಲ್ಲಿ ಜತೆಗಿದ್ದ ಎಲ್ಲರಿಗೂ ನಾನು ಚಿರಋಣಿ. ಇಷ್ಟು ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸಿ ನಾನು ಮಾಡಿದ ಸಾಧನೆಯಿಂದ ನನ್ನ ಕುಟುಂಬ ವರ್ಗಕ್ಕೆ ಖುಷಿ ಇದೆ. ಮುಂದಿನ ದಿನಗಳನ್ನು ಕುಟುಂಬದವರೊಂದಿಗೆ ಕಳೆಯುವುದೇ ನನ್ನ ಬಯಕೆ” ಎಂದು ಅವರು ಹೇಳಿದರು.

ಇದನ್ನೂ ಓದಿ Women’s T20 World Cup: ಕಣ್ಣೀರಿಟ್ಟ ಹಾಲಿ ನಾಯಕಿಯನ್ನು ಸಂತೈಸಿದ ಮಾಜಿ ನಾಯಕಿ

37 ವರ್ಷದ ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌ ಅವರು 2004ರಲ್ಲಿ ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸತೊಡಗಿದರು. ಅವರು 267 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಒಟ್ಟು 335 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಪರ ಅತ್ಯಧಿಕ ವಿಕೆಟ್‌ ಪಡೆದ ದಾಖಲೆಯನ್ನೂ ಹೊಂದಿದ್ದಾರೆ. ಇದರ ಜತೆಗೆ ಇಂಗ್ಲೆಂಡ್‌ನ‌ 3 ವಿಶ್ವಕಪ್‌ ವಿಜಯಗಳಲ್ಲಿ ಹಾಗೂ 4 ಆ್ಯಶಸ್‌ ಟ್ರೋಫಿ ಗೆಲುವಿನಲ್ಲಿಯೂ ಸ್ಕಿವರ್‌ ಬ್ರಂಟ್‌ ಮಹತ್ವದ ಕೊಡುಗೆ ನೀಡಿದ್ದರು.

“ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌ ಅವರು ಇಂಗ್ಲೆಂಡ್​ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಮುಂದಿನ ಜೀವನಕ್ಕೆ ಶುಭವಾಗಲಿ” ಎಂದು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ ಹಾರೈಸಿದೆ.

Exit mobile version