ಮುಂಬಯಿ: ಕಳೆದ ತಿಂಗಳಷ್ಟೇ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ಭಾರತ ಮಹಿಳೆಯರ ತಂಡ ನಾಯಕಿ ಮಿಥಾಲಿ ರಾಜ್, ತಮ್ಮ ನಿರ್ಧಾರದಿಂದ ವಾಪಸ್ ಬರುತ್ತಾರೆಯೇ? ಇಂಥದ್ದೊಂದು ಸುಳಿವು ಅವರು ನೀಡಿದ ಹೇಳಿಕೆಯೊಂದರ ಮೂಲಕ ಪ್ರಕಟಗೊಂಡಿದೆ. ಆದರೆ, ಅವರು ಅಂತಾರಾಷ್ಟ್ರೀಯ ತಂಡಕ್ಕೆ ಬರುವುದಿಲ್ಲ. ಬದಲಾಗಿ ಮುಂದಿನ ವರ್ಷದಿಂದ ಆರಂಭವಾಗಲಿರುವ ಮಹಿಳೆಯರ ಐಪಿಎಲ್‌ಗಾಗಿ ನಿವೃತ್ತಿಯಿಂದ ವಾಪಸ್ ಬರುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
೨೩ ವರ್ಷಗಳ ಕಾಲ ಭಾರತ ಮಹಿಳೆಯರ ತಂಡದ ಕಾಯಂ ಸದಸ್ಯರಾಗಿದ್ದ ಮಿಥಾಲಿ ರಾಜ್. ಜೂನ್ ೮ರಂದು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಆದರೆ, ಐಸಿಸಿ ಪಾಡ್‌ಕಾಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ್ತಿ ಇಶಾ ಗುಹಾ ಹಾಗೂ ನ್ಯೂಜಿಲೆಂಡ್ ಸ್ಪಿನ್ನರ್ ಫ್ರಾಂಕಿ ಮೆಕೆ ಅವರ ಜತೆ ಮಾತನಾಡಿದ ಮಿಥಾಲಿ, ನಿವೃತ್ತಿ ನಿರ್ಧಾರದಿಂದ ವಾಪಸ್ ಬರುವ ಆಯ್ಕೆಯೊಂದಿದೆ ಎಂದು ಹೇಳಿದ್ದಾರೆ.
ಮುಂದಿನ ವರ್ಷದಿಂದ ಮಹಿಳೆಯ ಐಪಿಎಲ್
೨೦೨೩ರಿಂದ ಮಹಿಳೆಯರ ಐಪಿಎಲ್ ಆಯೋಜಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೆಲವು ತಿಂಗಳ ಹಿಂದೆ ಹೇಳಿಕೆ ಕೊಟ್ಟಿದ್ದರು. ಆರು ಫ್ರಾಂಚೈಸಿಗಳ ಟೂರ್ನಿಯನ್ನು ಆಯೋಜಿಸುವುದು ಬಿಸಿಸಿಐ ಉದ್ದೇಶ. ಎರಡು ದಶಕಗಳ ಕಾಲ ಮಹಿಳೆಯರ ತಂಡದ ಪರ ಆಡಿರುವ ಮಿಥಾಲಿ, ಮಹಿಳೆಯರ ಟಿ೨೦ ಲೀಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಪೂರ್ಣ ಪ್ರಮಾಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ಚಾಲನೆ ಪಡೆಯಲಿರುವ ವರ್ಣರಂಜಿತ ಮಹಿಳೆಯರ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.
“ಐಪಿಎಲ್‌ನ ಪಾಲ್ಗೊಳ್ಳುವ ಉದ್ದೇಶ ಹೊಂದಿದ್ದೇನೆ. ಅದೊಂದು ಆಯ್ಕೆಯಷ್ಟೇ. ಮಹಿಳೆಯರ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಅಭಿಲಾಷೆಯೂ ಇದೆ,” ಎಂದು ಮಿಥಾಲಿ ರಾಜ್ ಹೇಳಿದ್ದರು.
ಶ್ರೇಷ್ಠ ಪ್ರತಿಭೆ
ಮಿಥಾಲಿ ರಾಜ್ ಮಹಿಳೆಯರ ಕ್ರಿಕೆಟ್ ಕ್ಷೇತ್ರದ ಶ್ರೇಷ್ಠ ಪ್ರತಿಭೆ. ೨೩ ವರ್ಷ ಭಾರತ ರಾಷ್ಟ್ರೀಯ ತಂಡದದಲ್ಲಿ ಆಡಿದ್ದ ಅವರು ಹಲವು ಸಾಧನೆಗಳನ್ನು ಮಾಡಿದ್ದರು. ೨೩೨ ಏಕದಿನ ಪಂದ್ಯಗಳಲ್ಲಿ ೭೮೦೫ ರನ್ ಬಾರಿಸಿರುವ ಅವರು ೮೯ ಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ೨೩೬೪ ರನ್ ಕಲೆ ಹಾಕಿದ್ದಾರೆ. ಅದೇ ರೀತಿ ೧೨ ಟೆಸ್ಟ್ ಪಂದ್ಯಗಳಲ್ಲಿ ೬೯೯ ರನ್ ಗಳಿಸಿದ್ದಾರೆ.
ಇದನ್ನೂ ಓದಿ | Mithali raj | ಆಟಗಾರ್ತಿಯಾಗಿ ಇನಿಂಗ್ಸ್ ಅಂತ್ಯಗೊಳಿಸಿದ ಮಿಥಾಲಿ ರಾಜ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ