ಭೋಪಾಲ್: ಭಾರತದ ಸೆನ್ಸೇಷನಲ್ ಯುವ ಈಜು ಪಟು, ನಟ ಆರ್. ಮಾಧವನ್(R Madhavan) ಅವರ ಪುತ್ರ ವೇದಾಂತ್ ಮಾಧವನ್(Vedaant Madhavan) ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ(Khelo India Youth Games) 5 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಮಗನ ಈ ಸಾಧನೆ ಕಂಡು ತಂದೆ ಮಾಧವನ್ ಸಲಾಂ ಹೊಡೆದಿದ್ದಾರೆ.
ಮಹಾರಾಷ್ಟ್ರ ತಂಡದೊಂದಿಗೆ ಆಡಿದ ವೇದಾಂತ್ ಅವರು ಈಜು ಸ್ಪರ್ಧೆಯಲ್ಲಿ 200 ಮೀ. 100ಮೀ, ಮತ್ತು 1500 ಮೀ. ಎಲ್ಲ ಫ್ರೀ-ಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರೆ, 800ಮೀ ಮತ್ತು 400 ಮೀ. ಫ್ರೀ-ಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಇನ್ನೆರಡು ಚಿನ್ನದ ಪದಕ ತಂಡ ವಿಭಾಗದಲ್ಲಿ ಪಡೆದರು. ಒಟ್ಟಾರೆ ಅವರು 7 ಪದಕ ಗೆದ್ದ ಸಾಧನೆ ಮಾಡಿದರು. ಇವರ ಈ ಸಾಧನೆಯಿಂದ ಮಹಾರಾಷ್ಟ್ರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವೇದಾಂತ್ ಅವರ ಈ ಸಾಧನೆಗೆ ತಂದೆ ಆರ್. ಮಾಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಮಾಧವನ್ “ಮಗನ ಈ ಸಾಧನೆ ಹೆಮ್ಮೆಪಡುವಂತೆ ಮಾಡಿದೆ. ಆತನ ಮುಂದಿನ ಎಲ್ಲ ಪ್ರಯತ್ನಕ್ಕೂ ನನ್ನ ಬೆಂಬಲ ಸಾದಾ ಇರುತ್ತದೆ. ಇನ್ನೂ ದೊಡ್ಡ ಮಟ್ಟದ ಸಾಧನೆ ಮಾಡುವ ಮೂಲಕ ದೇಶದ ಕೀರ್ತಿ ಹೆಚ್ಚಿಸುವಂತೆ ಮಾಡಲಿ” ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಎಲ್ಲ ಕ್ರೀಡಾಪಟುಗಳಿಗೂ ಅಭಿನಂದನೆಗಳು” ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಭಾರತದ ಭರವಸೆಯ ಈಜು ಪಟು
17 ವರ್ಷದ ವೇದಾಂತ್ ಮಾಧವನ್ ಅವರು ಭಾರತದ ಭರವಸೆಯ ಈಜು ಪಟುವಾಗಿ ಗುರುತಿಸಿಕೊಂಡಿದ್ದಾರೆ. 2022ರಲ್ಲಿ ಡೆನ್ಮಾರ್ಕ್‌ನ ಕೋಪನ್ ಹೇಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜುಕೂಟದಲ್ಲಿ 800 ಮೀಟರ್ಸ್ ಹಾಗೂ 1500 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇದಾಂತ್ ಮಾಧವನ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದರು. 800 ಮೀಟರ್ಸ್ ಗುರಿಯನ್ನು 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ತಲುಪಿ ವಿಶೇಷ ದಾಖಲೆ ಬರೆದಿದ್ದರು.
ಕಳೆದ ವರ್ಷ ಒಡಿಶಾದಲ್ಲಿ ನಡೆದಿದ್ದ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆಯುವುದರ ಜತೆಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಕೇವಲ 16:01.73 ಸೆಕೆಂಡ್ನಲ್ಲಿ ಗುರಿ ತಲುಪಿ ಇತಿಹಾಸ ಸೃಷ್ಟಿಸಿದ್ದರು. ಸದ್ಯ ಈಜಿನಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಅವರು ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದರೂ ಅಚ್ಚರಿಯಿಲ್ಲ.