ಮುಂಬಯಿ : ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಕೆಟಿಗ ಕೀರನ್ ಪೊಲಾರ್ಡ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ೨೦೧೦ರಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಸೇರಿಕೊಂಡಿದ್ದ ಅವರು ೧೨ ವರ್ಷಗಳ ಕಾಲ ಆ ತಂಡದ ಪ್ರಮುಖ ಆಧಾರ ಸ್ತಂಭ ಎನಿಸಿಕೊಂಡಿದ್ದರು. ಆದಾಗ್ಯೂ ಅವರು ಮುಂಬಯಿ ಇಂಡಿಯಾ ತಂಡದ ನಂಟು ತೊರೆದಿಲ್ಲ. ಅದೇ ತಂಡದ ಬ್ಯಾಟಿಂಗ್ ಕೋಚ್ ಆಗಿ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ.
ಮುಂಬಯಿ ಇಂಡಿಯನ್ಸ್ ತಂಡದ ಆಟಗಾರನ ಸ್ಥಾನದಿಂದ ಕೆಳಕ್ಕಿಳಿಯುವ ಬಗ್ಗೆ ಹಾಗೂ ಆ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯುವ ಬಗ್ಗೆ ಕೀರನ್ ಪೊಲಾರ್ಡ್ ಅವರು ಸುದೀರ್ಘ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
“ಇದು ಅಷ್ಟೊಂದು ಸುಲಭದ ನಿರ್ಧಾರವಲ್ಲ. ಇನ್ನಷ್ಟು ವರ್ಷಗಳ ಕಾಲ ತಂಡದ ಪರ ಆಟ ಮುಂದುವರಿಸಬೇಕಾಗಿತ್ತು. ಆದರೆ, ಫ್ರಾಂಚೈಸಿ ಜತೆ ಮಾತುಕತೆ ಮುಂದುವರಿಸಿದ ಬಳಿಕ ಇನ್ನಷ್ಟು ದಿನಗಳು ಆಟಗಾರನಾಗಿ ಮುಂದುವರಿಯದೇ ಇರಲು ನಿರ್ಧರಿಸಬೇಕಾಯಿತು. ಒಂದು ಮುಂಬಯಿ ಇಂಡಿಯನ್ಸ್ ಸದಸ್ಯ ಎಂದಾದ ಮೇಲೆ ಯಾವಾಗಲೂ ಅದೇ ಆಗಿರುತ್ತೇನೆ. ಅಂತೆಯೇ ಬ್ಯಾಟಿಂಗ್ ಕೋಚ್ ಆಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದೇ ರೀತಿ ಎಮ್‌ಐ ಎಮಿರೇಟ್ಸ್ ತಂಡದ ಪರವಾಗಿ ಆಡುತ್ತೇನೆ,” ಎಂದು ಅವರು ಹೇಳಿದ್ದಾರೆ.
ಮುಂಬಯಿ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ಅವರು ಪೊಲಾರ್ಡ್ ಸಾಧನೆಯನ್ನು ಕೊಂಡಾಡಿದ್ದಾರೆ. ಅಲ್ಲದೆ, ಬ್ಯಾಟಿಂಗ್ ಕೋಚ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿರುವ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ ವ| IPL 2023 | ಮುಂಬೈ ಇಂಡಿಯನ್ಸ್ ಜತೆಗಿನ ಸುದೀರ್ಘ ನಂಟು ಕಳೆದುಕೊಂಡ ಕೀರನ್ ಪೊಲಾರ್ಡ್