ಪಲ್ಲೆಕೆಲೆ: 16ನೇ ಆವೃತ್ತಿ ಏಷ್ಯಾಕಪ್ನ ಶನಿವಾರದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ(IND vs PAK) ಸವಾಲು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ(virat kohli) ಅವರು ತನ್ನ ಸಹ ಆಟಗಾರರಿಗೆ ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ. ಪಾಕಿಸ್ತಾನದಂತಹ ಉತ್ತಮ ಗುಣಮಟ್ಟದ ಬೌಲಿಂಗ್ ದಾಳಿಯನ್ನು ಎದುರಿಸಲು ಅತ್ಯುತ್ತಮ ಪ್ರದರ್ಶನವನ್ನೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಡೆಗಣಿಸಿದರೆ ಅಪಾಯ ಗ್ಯಾರಂಟಿ
ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಶುಕ್ರವಾರ ಮಾತನಾಡಿದ ವಿರಾಟ್ ಕೊಹ್ಲಿ, ನಮ್ಮ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಪಾಕ್ ಬೌಲರ್‌ಗಳನ್ನು ಕಡೆಗಣಿಸಬಾರದು ಅವರ ಬೌಲಿಂಗ್ ಉತ್ಕೃಷ್ಟ ಮಟ್ಟದಿಂದ ಕೂಡಿದೆ. ಯಾವುದೇ ಹಂತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಬಲ್ಲ ಪ್ರಭಾವಶಾಲಿ ಬೌಲರ್‌ಗಳನ್ನು ಬಾಬರ್ ಪಡೆ ಹೊಂದಿದೆ. ಹೀಗಾಗಿ ನಮ್ಮ ಎಲ್ಲ ಬ್ಯಾಟರ್ಗಳು ಎಚ್ಚರಿಕೆಂದ ಆಡಬೇಕು. ಹಗುರವಾಗಿ ಕಾಣಬಾರದು. ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ರೂಪಿಸಬೇಕು ಎಂದು ಪಂದ್ಯಕ್ಕೂ ಮುನ್ನವೇ ಎಚ್ಚರಿಸಿದ್ದಾರೆ.
ಸ್ಥಿರ ಪ್ರದರ್ಶನ ನೀಡುವೆ
ತಮ್ಮ ಬ್ಯಾಟಿಂಗ್ ಬಗ್ಗೆ ಮಾಹಿತಿ ನೀಡಿದ ಕೊಹ್ಲಿ, ಮೇಲಿನ ಮಾತು ನನಗೂ ಕೂಟ ಅನ್ವಯವಾಗುತ್ತದೆ. ಪ್ರತಿದಿನ, ಪ್ರತಿ ಅಭ್ಯಾಸದ ಅವಧಿ, ಪ್ರತಿ ವರ್ಷ, ಪ್ರತಿ ಋತುವಿನಲ್ಲಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ನೆರವಾಗುವುದೇ ನನ್ನ ಮೊದಲ ಗುರಿ. ಈ ಮನಸ್ಥಿತಿಯಿಲ್ಲದೆ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ನಾನು ಪಾಕ್ ವಿರುದ್ಧ ತೋರಿದ ಪ್ರದರ್ಶನವನ್ನೇ ಮತ್ತೆ ಮರುಕಳಿಸಲು ಪ್ರಯತ್ನಿಸುತ್ತೇನೆ. ಹಾಗಂತ ಪಾಕ್ ಬೌಲರ್‌ಗಳನ್ನು ಯಾವ ಕಾರಣಕ್ಕೂ ಕಡೆಗಣಿಸಲಾರೆ ಎಚ್ಚರಿಕೆಯ ಆಟವಾಡುವೆ ಎಂದು ತಿಳಿಸಿದರು.
ಇದನ್ನೂ ಓದಿ Asia Cup 2023: ಭಾರತ-ಪಾಕ್ ಏಷ್ಯಾಕಪ್ ಟೂರ್ನಿಯ ರೆಕಾರ್ಡ್ ಹೀಗಿದೆ
ಕೊಹ್ಲಿ ಬಗ್ಗೆ ಬಾಬರ್ ಮೆಚ್ಚುಗೆಯ ಮಾತು
ಬಾಬರ್ ಅಜಂ ಅವರು ಕೊಹ್ಲಿಯನ್ನು ಹೊಗಳಿದ್ದಾರೆ. ನನ್ನ ಮತ್ತು ವಿರಾಟ್ ಕೊಹ್ಲಿ ಮಧ್ಯೆಯ ಕಮೆಂಟ್ಗಳು ತುಂಬಾ ಆಹ್ಲಾದಕರವಾಗಿವೆ. ಅದು ನನಗೆ ತುಂಬಾ ಹೆಮ್ಮೆಯ ಕ್ಷಣವಾಗಿದೆ. ಮತ್ತು ಇದು ತುಂಬಾ ಒಳ್ಳೆಯದಾಗಿದೆ. ಏಕೆಂದರೆ ಕೆಲವು ವಿಷಯಗಳು ಮತ್ತು ಕೆಲವು ಪ್ರಶಂಸೆಗಳು ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅವರೊಬ್ಬರ ಸ್ಟಾರ್ ಆಟಗಾರ” ಎಂದು ಬಾಬರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“2019 ರ ವಿಶ್ವಕಪ್‌ನಲ್ಲಿ ನಾನು ವಿರಾಟ್ ಕೊಹ್ಲಿಯನ್ನು ಮೊದಲ ಬಾರಿ ಭೇಟಿಯಾದೆ. ಆಗ ಅವರು ಉತ್ತುಂಗದ ಫಾರ್ಮ್ನಲ್ಲಿದ್ದರು. ಈಗ ಕೂಡ ಇದ್ದಾರೆ. ನಾನು ಅವರಿಂದ ಕ್ರಿಕೆಟ್ನಲ್ಲಿ ಕಲಿಯಬೇಕಿರುವುದು ತಂಬಾ ಇದೆ. ಅವರನ್ನು ಭೇಟಿಯಾದ ಪ್ರತಿ ಸಲವು ಹಲವು ಸಲಹೆಯನ್ನು ಪಡೆದಿದ್ದೇನೆ. ವಿಶ್ವಕಪ್ ಕ್ರಿಕೆಟ್ ಕೂಡ ಹತ್ತಿರ ಇರುವ ಕ್ಷಣದಲ್ಲಿ ದಿಗ್ಗಜ ಆಟಗಾರನಿಂದ ಸಲಹೆ ಪಡೆದರೆ ಉತ್ತಮ. ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಪಂದ್ಯಕ್ಕೆ ಮಳೆಯ ಚಿಂತೆ
ಭಾರತಕ್ಕೆ ಈ ಕೂಟದ ಮೊದಲ ಪಂದ್ಯವಾದರೆ, ಪಾಕ್ಗೆ ಎರಡನೇ ಪಂದ್ಯ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಅಭಿಮಾನಿಗಳ ಈ ಆಸೆಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹೌದು ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.