ಅಹಮದಾಬಾದ್: 17ನೇ ಆವೃತ್ತಿಯ ಐಪಿಎಲ್ನ(IPL 2024) ಮೊದಲ ಕ್ವಾಲಿಫೈಯರ್(KKR vs SRH) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯದಲ್ಲಿ ಕೆಕೆಆರ್(Kolkata Knight Riders) ಮತ್ತು ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡಗಳು ಕಾದಾಟ ನಡೆಸಲಿದೆ. ಇತ್ತಂಡಗಳ ಈ ಹೋರಾಟಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ. ಸೋಮವಾರ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ATS) ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು (ISIS Terrorists) ಬಂಧಿಸಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇತ್ತಂಡಗಳಲ್ಲಿ ಕೆಕೆಆರ್ ಲೀಗ್ ಹಂತದ ಅಗ್ರಸ್ಥಾನಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ, ಲೀಗ್ ಹಂತದಲ್ಲಿ ಎದುರಾದ ಒಂದು ಪಂದ್ಯಗಳಲ್ಲಿ ಹೈದರಾಬಾದ್ಗೆ 4 ರನ್ ಅಂತರದ ಸೋಲುಣಿಸಿದ ಹಿರಿಮೆಯನ್ನೂ ಹೊಂದಿದೆ. ಜತೆಗೆ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್ 17 ಪಂದ್ಯ ಗೆದ್ದಿದೆ. ಹೈದರಾಬಾದ್ ಗೆದ್ದಿರುವುದು ಕೇವಲ 9 ಪಂದ್ಯ ಮಾತ್ರ. ಈ ಲೆಕ್ಕಾಚಾರದಲ್ಲಿ ಕೆಕೆಆರ್ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.
ಹೆಡ್-ಅಭಿಷೇಕ್ ಮೇಲೆ ಭಾರೀ ನಿರೀಕ್ಷೆ
ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ಇದೇ ಸ್ಟೇಡಿಯಂನಲ್ಲಿ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕದ ಆಟವಾಡುವ ಮೂಲಕ ಭಾರತದ ಗೆಲುವನ್ನು ಕಸಿದಿದ್ದರು. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ. ಜತೆಗೆ 25 ವರ್ಷದ ಎಡಗೈ ದಾಂಡಿಗ ಅಭಿಷೇಕ್ ಶರ್ಮ ಬ್ಯಾಟಿಂಗ್ ಮೇಲು ತಂಡ ಹೆಚ್ಚಿನ ನಂಬಿಕೆ ಇರಿಸಿದೆ.
ಈ ಆವೃತ್ತಿಯ ಐಪಿಎಲ್ನಲ್ಲಿ ಹೆಡ್ ಮತ್ತು ಅಭಿಷೇಕ್ ಜಿದ್ದಿಗೆ ಬಿದ್ದವತರಂತೆ ಬ್ಯಾಟ್ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರುವುದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಈ ಜೋಡಿ ಲೀಗ್ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 5 ಓವರ್ನಲ್ಲಿಯೇ 100ರ ಗಡಿ ದಾಟಿದ ದಾಖಲೆಯನ್ನು ಕೂಡ ಹೊಂದಿದ್ದಾರೆ. ಅಭಿಷೇಕ್ ಶರ್ಮ ಈ ಬಾರಿಯ ಕೂಟದಲ್ಲಿ 41 ಸಿಕ್ಸರ್ ಬಾರಿಸಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್, ಐಡೆನ್ ಮಾರ್ಕ್ರಮ್ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ನಲ್ಲಿ ನಾಯಕ ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಕೆಕೆಆರ್ ಕೂಡ ಸಮರ್ಥ ತಂಡ
ಗೌತಮ್ ಗಂಭಿರ್ ಅವರ ಮಾರ್ಗದರ್ಶನ ಮತ್ತು ಆಟಗಾರರ ಸಂಘಟಿತ ಪ್ರದರ್ಶನ ಕೆಕೆಆರ್ ಪಾಲಿನ ಬಲ. ಅದರಲ್ಲೂ ಆಲ್ರೌಂಡರ್ ಸುನೀಲ್ ನರೈನ್ ಅವರಂತು ಈ ಬಾರಿ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ತಂಡಕ್ಕೆ ಹಿನ್ನಡೆಯಾಗಿರುವುದೆಂದರೆ ಇಂಗ್ಲೆಂಡ್ನ ಫಿಲ್ ಸಾಲ್ಟ್ ಪಾಕ್ ವಿರುದ್ಧದ ಟಿ20 ಸರಣಿಯ ಭಾಗವಾಗಿ ತವರಿಗೆ ಮರಳಿದ್ದು. ಹೀಗಾಗಿ ಅವರ ತಂಡ ಇವರ ಸೇವೆ ಕಳೆದುಕೊಂಡಿದೆ. ಇವರ ಸ್ಥಾನದಲ್ಲಿ ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಈ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲ ಪಂದ್ಯವನ್ನಾಡುತ್ತಿರುವ ಕಾರಣ ಅವರ ಫಾರ್ಮ್ ಹೇಗಿರಲಿದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗಿದೆ.
ಇದನ್ನೂ ಓದಿ KKR vs SRH: ಕೆಕೆಆರ್-ಹೈದರಾಬಾದ್ ಕ್ವಾಲಿಫೈಯರ್ ಪಂದ್ಯದ ಹವಾಮಾನ ವರದಿ ಹೇಗಿದೆ?
ಆ್ಯಂಡ್ರೆ ರೆಸಲ್ ಈ ಬಾರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಯುವ ಆಟಗಾರ ಆಂಗ್ಕ್ರಿಶ್ ರಘುವಂಶಿ, ಗಾಯದಿಂದ ಚೇತರಿಕೆ ಕಂಡು ಕಮ್ಬ್ಯಾಕ್ ಮಾಡಿರುವ ನಿತೇಶ್ ರಾಣಾ, ವೆಂಕಟೇಶ್ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನೆರವು ನೀಡಲಿದ್ದಾರೆ. ರಿಂಕು ಸಿಂಗ್ ಕಳೆದ ಆವೃತ್ತಿಯಲ್ಲಿ ತೋರಿದ ಪ್ರದರ್ಶನ ಇದುವರೆಗೂ ತೋರಿಲ್ಲ. ಹೀಗಾಗಿ ಈ ಮಹತ್ವದ ಪಂದ್ಯದಲ್ಲಿ ಅವರು ಅಬ್ಬರಿಸುವ ಅನಿವಾರ್ಯತೆ ಇದೆ. 24 ಕೋಟಿ ವೀರ ಮಿಚೆಲ್ ಸ್ಟಾರ್ಕ್ ಈ ಪಂದ್ಯದಲ್ಲಾದರೂ ತಾವು ಪಡೆದ ಈ ಮೊತ್ತಕ್ಕೆ ನ್ಯಾಯ ಒದಗಿಸಲೇ ಬೇಕು. ದುಬಾರಿ ಮೊತ್ತ ಪಡೆದರೂ ಕೂಡ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ.