Site icon Vistara News

KL Rahul: ವಿಕೆಟ್ ಕೀಪಿಂಗ್ ಪಾತ್ರದಿಂದ ಕನ್ನಡಿಗ ಕೆ.ಎಲ್​ ರಾಹುಲ್​ಗೆ ಕೊಕ್​!

KL Rahul

ಮುಂಬಯಿ: ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ವಿಕೆಟ್ ಕೀಪಿಂಗ್ ಮಾಡಿದ್ದ ಭಾರತದ ಅನುಭವಿ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ವರದಿಯಾಗಿದೆ. ಸ್ಟಂಪ್‌ಗಳ ಹಿಂದೆ ತನ್ನ ಕೌಶಲ್ಯದಿಂದ ರಾಹುಲ್ ಅನೇಕರನ್ನು ಆಕರ್ಷಿಸಿದ್ದರೂ, ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರನ್ನು ವಿಕೆಟ್-ಕೀಪರ್ ಬ್ಯಾಟರ್ ಆಗಿ ಬಳಸಲಾಗುವುದಿಲ್ಲ ಎಂದು ವರದಿಯಾಗಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಆಯ್ಕೆ ಸಮಿತಿ ಮುಂಬರುವ ಟೆಸ್ಟ್​ ಕ್ರಿಕೆಟ್​ ಸರಣಿಯ ನಿಯೋಜನೆಯಲ್ಲಿ ಕೀಪಿಂಗ್​ಗೆ ಕೆ.ಎಸ್ ಭರತ್ ಮತ್ತು ಧ್ರುವ್ ಜುರೆಲ್​ ಅವರನ್ನು ಬಳಸಿಕೊಳ್ಳಲು ಮುಂದಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸುವಾಗ ಕೆಎಸ್​ ಭರತ್ ಮತ್ತು ಧ್ರುವ್ ಜುರೆಲ್ ಅವರನ್ನು ವಿಕೆಟ್-ಕೀಪರ್ ಪಾತ್ರಕ್ಕೆ ಆಯ್ಕೆ ಮಾಡಿದ್ದು ಎನ್ನಲಾಗಿದೆ.

ವಿದೇಶಿ ಪಿಚ್​ನಲ್ಲಿ ಮಾತ್ರ​ ಕೀಪಿಂಗ್​


ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸ್ಪಿನ್ ಸ್ನೇಹಿ ಹೋಮ್ ಪಿಚ್‌ಗಳಲ್ಲಿ ವಿಕೆಟ್ ಕೀಪರ್ ಪಾತ್ರಕ್ಕೆ ರಾಹುಲ್ ಸೂಕ್ತ ಎಂದು ಬಿಸಿಸಿಐ ಭಾವಿಸಿಲ್ಲ, ಆದ್ದರಿಂದ ಅವರನ್ನು ಕೇವಲ ವಿದೇಶಿ ಪಿಚ್​ಗಳಲ್ಲಿ ಕೀಪರ್​ ಆಗಿ ಬಳಸಿಕೊಳ್ಳುವ ಯೋಜನೆಯಲ್ಲಿದೆ ಎಂದು ವರದಿಯಾಗಿದೆ.

“ರಾಹುಲ್ ಇನ್ನು ಮುಂದೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುತ್ತಾರೆ. ವಿದೇಶಿ ಟೆಸ್ಟ್‌ಗಳಲ್ಲಿ ವೇಗಿಗಳ ಬೌಲಿಂಗ್​ಗೆ ಕೀಪಿಂಗ್​ ನಡೆಸುವುದು ಸುಲಭ ಆದರೆ, ದೇಶಿ ಪಿಚ್​ನಲ್ಲಿ ಅದರಲ್ಲೂ ಸ್ಪಿನ್ನರ್‌ಗಳ ಎಸೆತಗಳಿಗೆ ಕೀಪಿಂಗ್ ನಡೆಸುವುದು ಸುಲಭವಲ್ಲ. ಚೆಂಡು ತಿರುವು ಪಡೆಯುವ ಕಾರಣ ಓರ್ವ ಸ್ಪೆಷಲಿಸ್ಟ್ ಕೀಪರ್​ ಅತ್ಯಗತ್ಯ. ಹೀಗಾಗಿ ರಾಹುಲ್​ ಅವರನ್ನು ಇನ್ನು ಮುಂದೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ IND vs AFG: ಇಂದಿನ ಪಂದ್ಯದಲ್ಲಿ ಕೊಹ್ಲಿ ನಿರ್ಮಿಸಬಹುದಾದ ದಾಖಲೆಗಳ ಪಟ್ಟಿ ಹೀಗಿದೆ

“ರಾಹುಲ್​ಗೆ ತಂಡದಲ್ಲಿ ಹಲವು ಪಾತ್ರಗಳನ್ನು ನೀಡಿ ಅವರನ್ನು ಒತ್ತಡಕ್ಕೆ ಸಿಲುಕಿಸುವುದು ನಮಗೆ ಇಷ್ಟವಿಲ್ಲ, ಅವರ ತಂಡದ ಬ್ಯಾಟಿಂಗ್​ ಆಸ್ತಿಯಾಗಿದ್ದಾರೆ. ಸ್ಟಂಪ್‌ಗಳ ಹಿಂದೆ ನಿಂತಿರುವಾಗ ಅವರು ಗಾಯಗೊಂಡರೆ ತಂಡಕ್ಕೆ ದೊಡ್ಡ ನಷ್ಟ. ಹೀಗಾಗಿ ಇಂಗ್ಲೆಂಡ್​ ಸರಣಿಯಲ್ಲಿ ರಾಹುಲ್​ ಕೇವಲ ಬ್ಯಾಟಿಂಗ್​ ಮಾತ್ರ ಮಾಡಲಿದ್ದಾರೆ. ಭರತ್ ಮತ್ತು ಜುರೆಲ್ ನಮ್ಮ ವಿಕೆಟ್‌ಕೀಪರ್‌ಗಳಾಗಿರುತ್ತಾರೆ” ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾರತ ಪ್ರವಾಸದಲ್ಲಿ ಇಂಗ್ಲೆಂಡ್​ ಒಟ್ಟು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್​ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್​ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್​ಕೋಟ್​ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ.

2 ಟೆಸ್ಟ್​ ಪಂದ್ಯಕ್ಕೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಅವೇಶ್ ಖಾನ್.

Exit mobile version