ಮುಂಬಯಿ: ಕಳಪೆ ಬ್ಯಾಟಿಂಗ್ನಿಂದ ಟೀಕೆಗೆ ಗುರಿಯಾಗಿದ್ದ ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ತಮ್ಮ ಪತ್ನಿ ಅಥಿಯಾ ಶೆಟ್ಟಿ(KL Rahul and Athiya) ಜತೆ ಮಹಾಕಾಲ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಮದುವೆಯಾದ ಬಳಿಕ ಈ ಜೋಡಿ ಇದೇ ಮೊದಲ ಬಾರಿಗೆ ಮಹಾಕಾಲ್ ಉಜ್ಜಯಿನಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದೇ ವೇಳೆ ವಿಶೇಷ ಪೂಜೆ ಸಲ್ಲಿಸಿದರು. ರಾಹುಲ್ ಮತ್ತು ಅಥಿಯಾ ಉಜ್ಜಯಿನಿಗೆ ಭೇಟಿ ನೀಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಂಡಾಗ ಪತ್ನಿ ಅನುಷ್ಕಾ ಶರ್ಮಾ ಜತೆ ಉತ್ತರ ಪ್ರದೇಶದ ನೀಮ್ ಕರೋಲಿ ಬಾಬಾ ಮಂದಿರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಬ್ಯಾಕ್ಟು ಬ್ಯಾಕ್ ಶತಕ ಸಿಡಿಸಿ ಮತ್ತೆ ಬ್ಯಾಟಿಂಗ್ ಫಾರ್ಮ್ ಕಂಡು ಕೊಂಡರು. ಇದೀಗ ರಾಹುಲ್ ಕೂಡ ತಮ್ಮ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ದೇವರ ಮೊರೆ ಹೋಗಿದ್ದಾರೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ IND VS AUS: ಇಂದೋರ್ನಲ್ಲಿ ಟೀಮ್ ಇಂಡಿಯಾ ಆಟಗಾರರ ಟೆಸ್ಟ್ ಸಾಧನೆ ಹೇಗಿದೆ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಹುಲ್ ಅವರನ್ನು ತಂಡದಿಂದ ಕೈಬಿಡುವ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿದೆ. ಇದರ ನಡುವೆ ರಾಹುಲ್ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಅಚ್ಚರಿ ತಂದಿದೆ.