Site icon Vistara News

IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್​ ಆಟಗಾರ

KL Rahul

ಬೆಂಗಳೂರು: ಕನ್ನಡಿಗ ಕೆ.ಎಲ್​ ರಾಹುಲ್(KL Rahul) ಅವರ​ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಕೇಳಿಬಂದಿದೆ. ರಾಹುಲ್​ ಫಿಟ್​ ಆಗಿದ್ದು ಈ ಬಾರಿಯ ಐಪಿಎಲ್​ನಲ್ಲಿ​ ಆಡುವುದು ಖಚಿತ ಎಂದು ತಿಳಿದುಬಂದಿದೆ. ತೊಡೆ ನೋವಿನಿಂದಾಗಿ ರಾಹುಲ್​ ಐಪಿಎಲ್​ನಲ್ಲಿ(IPL 2024) ಆಡುವುದು ಅನುಮಾನ ಎನ್ನಲಾಗಿತ್ತು. ​

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಬಳಿಕ ಗಾಯದ ಸಮಸ್ಯೆಗೆ ತುತ್ತಾಗಿದ್ದ ರಾಹುಲ್,​ ಅಂತಿಮ ಮೂರು ಟೆಸ್ಟ್​ಗಳಿಗೆ ಮತ್ತೆ ತಂಡ ಸೇರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ಸಂಪೂರ್ಣ ಫಿಟ್​ ಆಗದ ಕಾರಣ ಟೆಸ್ಟ್​ ಸರಣಿಯಿಂದ ಅವರನ್ನು ಕೈಬಿಡಲಾಗಿತ್ತು. ಇದೇ ವೇಳೆ ರಾಹುಲ್​ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಲಿದ್ದು ಆರಂಭಿಕ ಹಂತದ ಐಪಿಎಲ್​ ಪಂದ್ಯಾವಳಿಗೆ ಅನುಮಾನ ಎನ್ನಲಾಗಿತ್ತು. ಇದೀಗ ಮೂಲಗಳ ಪ್ರಕಾರ ಅವರು ಲಂಡನ್​ಗೆ ತೆರಳುತ್ತಿಲ್ಲ. ಅವರು ಗಾಯದಿಂದ ಚೇತರಿಕೆ ಕಂಡಿದ್ದಾರೆ, ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಹೇಳಲಾಗಿದೆ.

ರಾಹುಲ್ ಸದ್ಯ ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ಶಿಬಿರಲ್ಲಿ ತೊಡಗಿದ್ದಾರೆ. ರಾಹುಲ್​ ಐಪಿಎಲ್​ಗೆ ಕಮ್ ಬ್ಯಾಕ್ ಸುದ್ದಿ ಕೇಳಿ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿಯೂ ರಾಹುಲ್​ ಗಾಯಗೊಂಡು ಸಂಪೂರ್ಣವಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ ಏಷ್ಯಾಕಪ್​ ಟೂರ್ನಿಯಲ್ಲಿ ಆಡುವ ಮೂಲಕ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು. ಪಾಕಿಸ್ತಾನ ವಿರುದ್ಧ ಕಣಕ್ಕಿಳಿದಿದ್ದ ಅಂದಿನ ಪಂದ್ಯದಲ್ಲಿ ರಾಹುಲ್​ ಶತಕ ಬಾರಿಸಿ ಮಿಂಚಿದ್ದರು. ಏಕದಿನ ವಿಶ್ವಕಪ್​ನಲ್ಲಿಯೂ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. 

2024ರ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಅನೌನ್ಸ್‌ ಆಗಿದೆ. ಮೊದಲ 17 ದಿನದ ವೇಳಾಪಟ್ಟಿಯನ್ನು ಬಿಸಿಸಿಐ ಕಳೆದ ವಾರ ಪ್ರಕಟಿಸಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಲಕ್ನೋ(lucknow super giants) ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 24ರಂದು ರಾಜಸ್ಥಾನ್​ ವಿರುದ್ಧ ಆಡಲಿದೆ.

ಇದನ್ನೂ ಓದಿ IPL 2024: ಸನ್​ರೈಸರ್ಸ್ ತಂಡಕ್ಕೆ ಪ್ಯಾಟ್​ ಕಮಿನ್ಸ್ ನೂತನ ನಾಯಕ

ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್ ಬಿಡುಗಡೆ ಮಾಡಿರುವ ಐಪಿಎಲ್​ 17ನೇ ಆವೃತ್ತಿಯ ಪ್ರೋಮೊದಲ್ಲಿ​ ಕೆ.ಎಲ್ ರಾಹುಲ್ (KL Rahul) ಅವರು ಅತ್ಯಂತ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿಯೇ ರಗಡ್ ಆಗಿ ಮಾತನಾಡಿದ್ದು, ಅಂಪೈರ್ ವಿರುದ್ಧ ಸಿಡಿದಿದ್ದಾರೆ. ರಾಹುಲ್​ ಗೆಳೆಯರೊಂದಿಗೆ ಆರ್​ಸಿಬಿ ಮ್ಯಾಚ್ ನೋಡುತ್ತಿರುತ್ತಾರೆ. ಈ ವೇಳೆ ಆರ್​ಸಿಬಿ ಬ್ಯಾಟರ್ ಸಿಕ್ಸರ್​ ಬಾರಿಸಿದರೂ ಫೀಲ್ಡ್​ ಅಂಪೈರ್​ ಔಟೆಂದು ತೀರ್ಪು ನೀಡುತ್ತಾರೆ. ಇದನ್ನು ಗಮನಿಸಿದ ರಾಹುಲ್, ‘ಯಾರೋ ಇವ್ನು, ಅಂಪೈರ್ ಅಂತೆ ಅಂಪೈರ್, ಅದು ಔಟಿಲ್ಲ ಮಾರಾಯ, ಹುಚ್ಚಾನಾ ನೀನು, ಇವನನ್ನು ಹಿಡ್ಕೊಂಡು ಯಾರಾದರೂ ಚಚ್ಚಿಹಾಕಿ’ ಎಂದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

Exit mobile version