Site icon Vistara News

ಅಭ್ಯಾಸ ಆರಂಭಿಸಿದ K L Rahul, ವಿಂಡೀಸ್‌ ಪ್ರವಾಸಕ್ಕೆ ಆರಂಭಿಕ ಬ್ಯಾಟರ್‌ಗಳ ಚಿಂತೆ ದೂರ

kl rahul

ಬೆಂಗಳೂರು: ಭಾರತ ತಂಡದ ಆರಂಭಿಕ ಬ್ಯಾಟರ್‌ K L Rahul ಗಾಯದ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಿರುವ ಸೂಚನೆ ಲಭಿಸಿದೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (NCA) ನೆಟ್‌ನಲ್ಲಿ ಅಭ್ಯಾಸ ನಡೆಸುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಿವೆ.

ಐಪಿಎಲ್‌ ೧೫ನೇ ಆವೃತ್ತಿ ಮುಕ್ತಾಯದ ಬೆನ್ನಲ್ಲೆ K L Rahul ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅವರು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗೆ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದರೂ, ಗಾಯದಿಂದ ಮುಕ್ತಿ ಪಡೆಯಲು ಸಾಧ್ಯವಾಗದ ಕಾರಣ ಆಡಲು ಸಾಧ್ಯವಾಗಿರಲಿಲ್ಲ. ಅಂತೆಯೇ ಇಂಗ್ಲೆಂಡ್‌ ಪ್ರವಾಸ ಟೆಸ್ಟ್‌ ಪಂದ್ಯದಲ್ಲೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಟಿ೨೦ ಮತ್ತು ಏಕದಿನ ಸರಣಿಯಲ್ಲೂ ಅವಕಾಶ ಕಳೆದಕೊಂಡಿದ್ದರು. ಏತನ್ಮಧ್ಯೆ ಅವರು ಮುಂಬರುವ ವೆಸ್ಟ್‌ ಇಂಡೀಸ್‌ ಪ್ರವಾಸದ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಸತತ ಅಭ್ಯಾಸ ಆರಂಭಿಸಿದ್ದಾರೆ.

K L Rahul ಅವರಿಗೆ ತೊಡೆ ಸಂದು ನೋವು ಉಂಟಾಗಿತ್ತು. ಸಾಮಾನ್ಯ ಚಿಕಿತ್ಸೆ ಮೂಲಕ ಅದನ್ನು ಸರಿಪಡಿಸಲು ಮುಂದಾಗಿದ್ದರೂ ಸಂಪೂರ್ಣ ವಾಸಿಯಾಗಿರಲಿಲ್ಲ. ಬಳಿಕ ಅವರು ಜರ್ಮನಿಗೆ ತೆರಳಿ ಸರ್ಜರಿ ಮಾಡಿಕೊಂಡಿದ್ದರು. ಅಲ್ಲಿಂದ ಭಾರತಕ್ಕೆ ವಾಪಸ್‌ ಬಂದ ಅವರು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿರುವ ಲಕ್ಷಣ ಕಂಡಿದ್ದು, ಬ್ಯಾಟ್‌ ಹಿಡಿದು ನೆಟ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ.

ರಾಹುಲ್‌ ಅವರ ಅನುಪಸ್ಥಿತಿ ಭಾರತ ತಂಡದ ಆರಂಭಿಕ ವಿಭಾಗಕ್ಕೆ ಆಘಾತ ಕೊಟ್ಟಿದೆ ಎಂಬುವ ಚರ್ಚೆಯೂ ನಡೆಯುತ್ತಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ತಂಡದ ಆರಂಭಿಕ ಬ್ಯಾಟರ್‌ಗಳು ಪದೇಪದೆ ಕೈಕೊಡುತ್ತಿದ್ದಾರೆ. ಉತ್ತಮ ಇನಿಂಗ್ಸ್‌ ಕಟ್ಟದ ಕಾರಣ ಭಾರತ ತಂಡದ ಸೋಲಿಗೆ ಕಾರಣವಾಗುತ್ತಿದೆ. ರಾಹುಲ್‌ ಇದ್ದಿದ್ದರೆ ಇಂಥ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂಬುದು ಸೋಶಿಯಲ್‌ ಮೀಡಿಯಾಗಳ ಚರ್ಚೆಯಾಗಿದೆ.

ವೆಸ್ಟ್‌ ಇಂಡೀಸ್‌ಗೆ ಪ್ರವಾಸ ತೆರಳಿರುವ ತಂಡ ಇಂತಿದೆ

ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್‌, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್‌, ಶ್ರೇಯಸ್‌ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ, ಕುಲ್ದೀಪ್‌ ಯಾದವ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.

ಇದನ್ನೂ ಓದಿ |the 6ixty: ಹೊಸ ಮಾದರಿಯ ಕ್ರಿಕೆಟ್‌ ಲೀಗ್‌ ಜಾರಿಗೆ ತಂದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ

Exit mobile version