ಧರ್ಮಶಾಲಾ: ಭಾರತ ತಂಡ ನ್ಯೂಜಿಲ್ಯಾಂಡ್(India vs New Zealand) ವಿರುದ್ಧ ಇಂದು ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ. ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ಕೆ.ಎಲ್ ರಾಹುಲ್(KL Rahul) ಅವರ ಪ್ರದರ್ಶನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್, “ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ಬ್ಯಾಟಿಂಗ್ ಮಾತ್ರವಲ್ಲದೆ ಕೀಪಿಂಗ್ನಿಂದಲೂ ಗಮನ ಸೆಳೆಯುತ್ತಿದ್ದಾರೆ. ಆಡಿದ 4 ಪಂದ್ಯಗಳಿಂದ 5 ಕ್ಯಾಚ್ ಪಡೆದುಕೊಂಡಿದ್ದಾರೆ. ಅವರ ಕೀಪಿಂಗ್ ಪ್ರದರ್ಶನ ಉತ್ತಮಗೊಂಡಿದೆ. ಅಲ್ಲದೆ ಪರಿಪೂರ್ಣ ಕೀಪಿಂಗ್ ನಡೆಸುವ ಕೌಶಲ್ಯ ಅವರಲ್ಲಿ ಕಂಡುಬಂದಿದೆ” ಎಂದು ಹೇಳಿದರು.
“ವಿಶ್ವಕಪ್ ಕೂಟದಲ್ಲಿ ಕೆ.ಎಲ್.ರಾಹುಲ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಅಲ್ಲದ ಅವರು ಈಗ ತೋರುವ ಪ್ರದರ್ಶನವನ್ನು ಗಮನಿಸುವಾಗ ಅವರನ್ನು ಯಾರು ಕೂಡ ಪೂರ್ಣ ಪ್ರಮಾಣದ ಕೀಪರ್ ಆಗಿರಲಿಲ್ಲ ಎಂದು ಹೇಳುವುದು ಕಷ್ಟವಾಗಿದೆ. ಗಾಯದ ಸಮಸ್ಯೆಯಿಂದ ಫಿಟ್ನೆಸ್ ಪಡೆದು ವಿಕೆಟ್ ಕೀಪಿಂಗ್ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಹಿಂದಿಗಿಂತಲೂ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮತ್ತು ಕೀಪಿಂಗ್ ನಡೆಸುತ್ತಿದ್ದಾರೆ” ಎಂದು ರಾಹುಲ್ ದ್ರಾವಿಡ್ ಶ್ಲಾಘಿಸಿದ್ದಾರೆ.
ರಿಷಭ್ ಪಂತ್ ಅವರು ಕಾರು ಅಪಘಾತದಿಂದ ಗಾಯಗೊಂಡ ಬಳಿಕ ಕೆ.ಎಲ್ ರಾಹುಲ್ ಅವರನ್ನು ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ವಿಕೆಟ್ ಕೀಪರ್ ಆಗಿ ಸಾಕಷ್ಟು ಪಂದ್ಯಗಳಲ್ಲಿ ಬಳಸಿಕೊಂಡು ಅವರನ್ನು ಪರಿಪೂರ್ಣ ವಿಕೆಟ್ ಕೀಪರ್ ಆಗಿಸಬೇಕೆಂದು ನಾವು ಯೋಚಿಸಿದ್ದೆವು. ಆದರೆ ಅವರಿಗೆ ಗಾಯದ ಸಮಸ್ಯೆ ಕಾಡಿತು. ಆದರೆ ರಾಹುಲ್ ಚೇತರಿಕೆ ಕಂಡು ಬಂದ ಮರು ಪಂದ್ಯದಲ್ಲೇ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ. ಅವರ ಆಟವನ್ನು ನೋಡಲು ನಿಜಕ್ಕೂ ಸಂತಸವಾಗುತ್ತಿದೆ ಎಂದು ದ್ರಾವಿಡ್ ಹೇಳಿದ್ದಾರೆ.
ಸ್ನಾನ ಮುಗಿಸಿ ಮೈದಾನಕ್ಕೆ ಓಡಿ ಬಂದ ರಾಹುಲ್
ಆಸ್ಟ್ರೇಲಿಯಾ ವಿರುದ್ಧ ಚೆನ್ನೈಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಹುಲ್ ಅವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ನಡೆಸಿದ ಭಾರತ ಘಾತಕ ಬೌಲಿಂಗ್ ನಡೆಸಿ ಕಮಿನ್ಸ್ ಪಡೆಯನ್ನು 199ಕ್ಕೆ ಕಟ್ಟಿ ಹಾಕಿತ್ತು.
ಸಣ್ಣ ಮೊತ್ತವನ್ನು ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್ಗಳು ಬೆನ್ನಟ್ಟಬಹುದು ಎಂದು ಯೋಚಿಸಿ ರಾಹುಲ್ ಸ್ನಾನ ಮಾಡಿ ವಿಶ್ರಾಂತಿ ಪಡೆಯವ ಯೋಜನೆಯಲ್ಲಿದ್ದರಂತೆ. ಆದರೆ ಅವರು ಬಾತ್ ರೂಮ್ನಿಂದ ಹೊರ ಬರುತ್ತಿದ್ದಂತೆ 2 ರನ್ಗೆ ತಂಡದ ಮೂರು ವಿಕೆಟ್ ಉರುಳಿ ಹೋಗಿತ್ತು. ಸರಿಯಾಗಿ ದೇಹದ ಒದ್ದೆಯನ್ನು ಒರೆಸಿಕೊಳ್ಳದೆ ತರಾತುರಿಯಲ್ಲಿ ಪ್ಯಾಡ್ ಮತ್ತು ಗ್ಲೌಸ್ ಕಟ್ಟಿಕೊಂಡು ಮೈದಾನಕ್ಕೆ ಓಡಿ ಬಂದ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಅಜೇಯ 97 ರನ್ಗಳ ಕೊಡುಗೆ ನೀಡಿ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರು. ಭಾರತದ ಮೂರು ವಿಕೆಟ್ ಬೀಳುವಾಗ ತಾನು ಬಾತ್ರೂಮ್ನಲ್ಲಿದ್ದೆ ಎಂಬ ವಿಚಾರದನ್ನು ರಾಹುಲ್ ಪಂದ್ಯದ ಬಳಿಕ ರಿವೀಲ್ ಮಾಡಿದ್ದರು. ಇದೇ ರೀತಿಯ ಸಂಕಟ ಅಂದು ಕಪಿಲ್ ದೇವ್ಗೂ 1983ರ ಏಕದಿನ(1983 World Cup) ವಿಶ್ವಕಪ್ ಟೂರ್ನಿಯಲ್ಲಿ ಎದುರಾಗಿತ್ತು. ಕಪಿಲ್ ಆ ಪಂದ್ಯವನ್ನು ಗೆಲ್ಲಿಸಿದಂತೆ ರಾಹುಲ್ ಕೂಡ ಆಸೀಸ್ ವಿರುದ್ಧದ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು.
ಇದನ್ನೂ ಓದಿ IND vs NZ: ಇಂಡೋ-ಕಿವೀಸ್ ಪಂದ್ಯಕ್ಕೂ ಮುನ್ನ ಧೋನಿ ರನೌಟ್ ನೆನಪಿಸಿದ ಐಸಿಸಿ
ಐಪಿಎಲ್ ವೇಳೆ ಗಾಯಗೊಂಡಿದ್ದ ರಾಹುಲ್
31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು. ಅಲ್ಲದೆ ಇದೇ ಪಂದ್ಯದಲ್ಲಿ ಶತಕ ಕೂಡ ಬಾರಿಸಿ ತಮ್ಮ ವಿರುದ್ಧ ಟೀಕೆ ಮಾಡಿದ್ದವರ ಬಾಯಿ ಮುಚ್ಚಿಸಿದ್ದರು.