ಮುಂಬಯಿ: ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಮಿಂಚಿದರು. ಸೂರ್ಯ ಬ್ಯಾಟಿಂಗ್ ಪ್ರತಾಪದಿಂದ ಭಾರತ 91 ರನ್ ಅಂತರದಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಆದರೆ ಸೂರ್ಯ ಬ್ಯಾಟಿಂಗ್ ಬಗ್ಗೆ ಕೆ.ಎಲ್. ರಾಹುಲ್(KL Rahul) ಮಾಡಿದ ಒಂದು ಶ್ಲಾಘನೆಯ ಪೋಸ್ಟ್ ಇದೀಗ ವೈರಲ್ ಆಗಿದೆ.
ಸೂರ್ಯಕುಮಾರ್ ಯಾದವ್ ಲಂಕಾ ವಿರುದ್ಧ ಶತಕ ದಾಖಲಿಸಿದ ವೇಳೆ ಕೆ.ಎಲ್ ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ತುಳು ಭಾಷೆಯಲ್ಲಿ ಸೂರ್ಯ ಅವರನ್ನು ಶ್ಲಾಘಿಸಿ ಮೆಚ್ಚುಗೆ ಸೂಚಿಸಿದ್ದಾರೆ. ರಾಹುಲ್ ಸ್ಟೋರಿಯನ್ನು ಶೇರ್ ಮಾಡಿರುವ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಕೂಡ ತುಳುವಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ತುಳುವರ ಹೃದಯ ಗೆದ್ದಿದೆ.
ಕೆ.ಎಲ್ ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೂರ್ಯಕುಮಾರ್ ಯಾದವ್ ಶತಕದ ಫೋಟೊ ಹಂಚಿಕೊಂಡು ತುಳುವಿನಲ್ಲಿ “ಭಾರೀ ಎಡ್ಡೆ ಗೊಬ್ಬಿಯ” (ತುಂಬಾ ಚೆನ್ನಾಗಿ ಆಡಿದ್ದೀಯಾ) ಎಂದು ಬರೆದುಕೊಂಡಿದ್ದಾರೆ. ಬಳಿಕ ಈ ಸ್ಟೋರಿಗೆ ಸೂರ್ಯ ಪತ್ನಿ ದೇವಿಶಾ ಶೆಟ್ಟಿಯನ್ನು ಕೂಡ ಕೆ.ಎಲ್ ರಾಹುಲ್ ಮೆನ್ಶನ್ ಮಾಡಿದ್ದಾರೆ.
ಇದಕ್ಕೆ ಸೂರ್ಯಕುಮಾರ್ ಮಡದಿ ದೇವಿಶಾ ಶೆಟ್ಟಿ ಕೂಡ ತುಳುವಿನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕೆ.ಎಲ್ ರಾಹುಲ್ ಸ್ಟೋರಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ದೇವಿಶಾ “ಚೂರು ತುಳು ಕಲ್ಪಾವೊಡು ನನ ಆರೆಗ್” (ಇನ್ನು ಅವರಿಗೂ ಸ್ವಲ್ಪ ತುಳು ಕಲಿಸಬೇಕು) ಎಂದು ಹೇಳಿದ್ದಾರೆ. ಸೂರ್ಯಕುಮಾರ್ ಪತ್ನಿ ಮೂಲತಃ ಕರಾವಳಿಯವರಾದ ಕಾರಣ ತುಳು ಭಾಷೆಯಲ್ಲೇ ಉತ್ತರ ನೀಡಿದ್ದಾರೆ. ಜತೆಗೆ ಕೆ.ಎಲ್. ರಾಹುಲ್ ಕೂಡ ಮಂಗಳೂರಿನಲ್ಲೇ ಬೆಳೆದ ಕಾರಣ ಅವರಿಗೂ ತುಳು ಭಾಷೆ ಮಾತನಾಡಲು ಬರುತ್ತದೆ. ಒಟ್ಟಾರೆ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಪತ್ನಿ ತುಳು ಭಾಷೆಯಲ್ಲೇ ಪ್ರತಿಕ್ರಿಯೆ ನೀಡುವ ಮೂಲಕ ತುಳುನಾಡ ಹೃದಯ ಗೆದ್ದಿದ್ದಾರೆ.
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್