ಅಡಿಲೇಡ್: ಆಸ್ಟ್ರೇಲಿಯಾ ಆತಿಥ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್(KL Rahul)ಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವ ಕಪ್‌ನಲ್ಲಿ ಭಾರತ ಆಡಿದ ಮೂರು ಪಂದ್ಯಗಳಲ್ಲಿಯೂ ಕೆ.ಎಲ್. ರಾಹುಲ್ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದರು. ಆದರೆ ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ “ಕೆ.ಎಲ್ ರಾಹುಲ್ ಅದ್ಭುತ ಆಟಗಾರ ಹಾಗೂ ಅತ್ಯುತ್ತಮವಾದ ದಾಖಲೆಯನ್ನು ಹೊಂದಿದ್ದಾರೆ. ಇದು ಟಿ20 ಕ್ರಿಕೆಟ್ ಆಗಿರುವುದರಿಂದ ಇಂತಹ ಏರಿಳಿತಗಳು ನಡೆಯುವುದು ಸಾಮಾನ್ಯ. ಅಂದಹಾಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಆಸ್ಟ್ರೇಲಿಯಾ ಪಿಚ್ನಲ್ಲಿ ಹೊಸ ಚೆಂಡಿನಲ್ಲಿ ಆಡುವುದು ಅಷ್ಟು ಸುಲಭದ ಮಾತಲ್ಲ. ಎಲ್ಲ ತಂಡದ ಆರಂಭಿಕ ಆಟಗಾರರು ಕೂಡ ಆಸೀಸ್ ಪಿಚ್ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ರಾಹುಲ್ಗೂ ಇದೇ ಸಮಸ್ಯೆ ಕಾಡಿದ್ದು ಮುಂದಿನ ಪಂದ್ಯದಲ್ಲಿ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ದ್ರಾವಿಡ್ ಹೇಳಿದ್ದಾರೆ.
“ಕೆ.ಎಲ್ ರಾಹುಲ್ ಅವರ ಸಾಮರ್ಥ್ಯದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಅವರ ಬಗ್ಗೆ ಹೊರಗಡೆ ಏನು ಮಾತನಾಡುತ್ತಿದ್ದಾರೆ ಎನ್ನುವ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಆಟಗಾರರ ಬಗ್ಗೆ ನಮಗೆ ನಂಬಿಕೆ ಇದೆ. ಹಾಗೂ ನಮ್ಮ ಮನಸಿನಲ್ಲಿ ಉತ್ತಮ ಉಪಾಯಗಳಿವೆ. ಆಟಗಾರ ಎಂದ ಮೇಲೆ ಏರಿಳಿತಗಳು ಇದ್ದೇ ಇರುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಎಲ್ಲ ಆಟಗಾರರ ಗುಣಮಟ್ಟದ ಬಗ್ಗೆ ನಮಗೆ ತಿಳಿದಿದೆ. ಹಾಗಾಗಿ ಎಲ್ಲರನ್ನೂ ಬೆಂಬಲಿಸುತ್ತೇವೆ” ಎಂದು ದ್ರಾವಿಡ್ ತಿಳಿಸಿದರು.
ಇದನ್ನೂ ಓದಿ | T20 World Cup | ಅಫಘಾನಿಸ್ತಾನದ ವಿರುದ್ಧ 6 ವಿಕೆಟ್ ಗೆಲುವು; ಲಂಕಾ ಸೆಮಿ ಆಸೆ ಜೀವಂತ