ಲಕ್ನೋ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಆರ್ಸಿಬಿ ತಂಡಕ್ಕೆ ಆಗಮಿಸಲಿದ್ದಾರೆ ಎಂದು ಕಾದು ಕುಳಿತಿದ್ದ ತವರಿನ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಹೌದು, ರಾಹುಲ್ ಅವರನ್ನು ಲಕ್ನೋ(Lucknow Super Giants) ತಂಡ ಮತ್ತೆ 2025ರ ಐಪಿಎಲ್ ಆವೃತ್ತಿಯಲ್ಲಿ ತಂಡದಲ್ಲೆ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ(ಸೋಮವಾರ) ಕೆ.ಎಲ್ ರಾಹುಲ್ ಲಕ್ನೋ(LSG) ತಂಡದ ಮಾಲಿಕ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ಅವರು ಮುಂದಿನ ಆವೃತ್ತಿಯಲ್ಲಿಯೂ ಲಕ್ನೋ ತಂಡದ ಪರ ಆಡುವುದು ಖಚಿತ ಎನ್ನುವಂತಿದೆ. ಇದೀಗ ವರದಿಯಾದ ಪ್ರಕಾರ ರಾಹುಲ್ ಲಕ್ನೋ ತಂಡದ ಪರ ಆಡಿದರೂ ನಾಯಕನ ಸ್ಥಾನದಲ್ಲಿ ಮುಂದುವರಿಯುದಿಲ್ಲ ಎನ್ನಲಾಗಿದೆ. ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಅವರು ನಾಯಕತ್ವ ಬೇಡ ಎಂದಿರುವುದಾಗಿ ವರದಿಯಾಗಿದೆ. ನಾಯಕತ್ವದ ಒತ್ತಡದಿಂದ ಅವರಿಗೆ ಸರಿಯಾಗಿ ಬ್ಯಾಟಿಂಗ್ ಕಡೆ ಗಮನಕೊಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಲಕ್ನೋ ಫ್ರಾಂಚೈಸಿಗೆ ಹತ್ತಿರವಿರುವ ಮೂಲಗಳು ಕೂಡ ರಾಹುಲ್ ಅವರನ್ನು ಉಳಿಸಿಕೊಳ್ಳಲಾಗುವುದು ಎಂದು ದೃಢಪಡಿಸಿದೆ. ನೂತನ ನಾಯಕನ ರೇಸ್ನಲ್ಲಿ ನಿಕೋಲಸ್ ಪೂರನ್ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ. ಸೋಮವಾರ ರಾಹುಲ್ ಅವರು ಗೋಯೆಂಕಾ ಅವರನ್ನು ಕೋಲ್ಕತ್ತಾದ ಅಲಿಪುರದಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾಗಿ ವಿಷಯಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ತಂಡದ ಮೆಂಟರ್ ಮತ್ತು ಕೋಚಿಂಗ್ ಸಿಬ್ಬಂದಿ ಆಯ್ಕೆ ಬಗ್ಗೆಯೂ ರಾಹುಲ್ ಮತ್ತು ಗೋಯೆಂಕಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಸುಮಾರು ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು.
ಇದನ್ನೂ ಓದಿ KL Rahul : ರಾಹುಲ್ ಲಕ್ನೊ ತಂಡದಲ್ಲಿ ಮುಂದುವರಿಯುವುದು ಖಚಿತ, ಮಾಲೀಕ ಗೊಯೆಂಕಾ ಭೇಟಿಯಾದ ಕನ್ನಡಿಗ
ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ರಾಹುಲ್ ಬೇಸರಗೊಂಡಿದ್ದರು. ಈ ವೇಳೆಯೇ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ತೊರೆಯುವುದು ಬಹುತೇಕ ಖಚಿತ ಎನ್ನಲಾಗಿತ್ತು. ಹೀಗಾಗಿ ಅವರು ಆರ್ಸಿಬಿಗೆ ಬರಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರು ಲಕ್ನೋ ತಂಡದಲ್ಲೇ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.
ಐಪಿಎಲ್(IPL 2025) ಮೆಗಾ(mega auction) ಹರಾಚಿನಲ್ಲಿ ಪ್ರತಿ ತಂಡಕ್ಕೆ ಗರಿಷ್ಠ 4ರ ಬದಲಾಗಿ 6 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ ಎಂದು ವರದಿಯಾಗಿದೆ. ಬಿಸಿಸಿಐ ಈ ಮುನ್ನ ಗರಿಷ್ಠ 4 ಆಟಗಾರರ ರಿಟೇನ್ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತ್ತು. ಅಲ್ಲದೆ 2022ರಲ್ಲಿಯೂ 4 ಆಟಗಾರರ ರಿಟೇನ್ ಅವಕಾಶ ನೀಡಿತ್ತು. ಈ ಬಾರಿ ಫ್ರಾಂಚೈಸಿಗಳು 8 ಆಟಗಾರರನ್ನು ರೀಟೆನ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿತ್ತು. ಇದೀಗ ಬಿಸಿಸಿಐ 6 ಆಟಗಾರರ ರಿಟೇನ್ಗೆ ಅವಕಾಶ ಕಲ್ಪಿಸಿದೆ ಎನ್ನಲಾಗಿದೆ. ಜತೆಗೆ ಬಾರಿ ರೈಟ್ ಟು ಮ್ಯಾಚ್(ಆರ್ಟಿಎಂ) ಕಾರ್ಡ್ ಪದ್ಧತಿಯನ್ನೂ ಮತ್ತೆ ತರಲಾಗುವುದು ಎಂದು ವರದಿಯಾಗಿದೆ.