ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024) ಆರಂಭಕ್ಕೆ ಇನ್ನು 2 ವಾರಗಳು ಮಾತ್ರ ಬಾಕಿ ಉಳಿದಿದೆ. ಎಲ್ಲ ಫ್ರಾಂಚೈಸಿಗಳು ಈಗಾಗಲೇ ಟೂರ್ನಿಗಾಗಿ ಸಿದ್ಧತೆಯನ್ನು ಆರಂಭಿಸಿದೆ. ಲಕ್ನೋ ತಂಡದ ನಾಯಕ ಕೆ.ಎಲ್ ರಾಹುಲ್(KL Rahul) ಕೂಡ ಐಪಿಎಲ್ನಲ್ಲಿ ಆಡಲು ಎನ್ಸಿಎಯಲ್ಲಿ ಕಠಿಣ ಫಿಟ್ನೆಸ್ ಅಭ್ಯಾಸ ನಡೆಸಿದ್ದಾರೆ.
ರಾಹುಲ್ ಇನ್ನೊಂದು ವಾರದಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ಅವರಿಗೆ ಐಪಿಎಲ್ ಆಡಲು ಬಿಸಿಸಿಐ ಅನುಮತಿ ನೀಡಲಿದೆ. ಹೀಗಾಗಿ ರಾಹುಲ್ ಎನ್ಸಿಎನಲ್ಲಿರುವ ಜಿಮ್ನಲ್ಲಿ ಭಾರೀ ಕಸರತ್ತು ಆರಂಭಿಸಿದ್ದು, ಫಿಟ್ನೆಸ್ ಪಾಸ್ ಮಾಡುವ ವಿಶ್ವಾಸದಲ್ಲಿದ್ದಾರೆ. ಅವರ ವರ್ಕೌಟ್ ವಿಡಿಯೊ ನೋಡುವಾಗ ಐಪಿಎಲ್ ಕಮ್ಬ್ಯಾಕ್ ಖಚಿತ ಎಂಬಂತಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಗಾಯದ ಸಮಸ್ಯೆಗೆ ತುತ್ತಾಗಿದ್ದ ರಾಹುಲ್, ಅಂತಿಮ ಮೂರು ಟೆಸ್ಟ್ಗಳಿಗೆ ಮತ್ತೆ ತಂಡ ಸೇರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ಸಂಪೂರ್ಣ ಫಿಟ್ ಆಗದ ಕಾರಣ ಟೆಸ್ಟ್ ಸರಣಿಯಿಂದ ಅವರನ್ನು ಕೈಬಿಡಲಾಗಿತ್ತು. ಇದೇ ವೇಳೆ ರಾಹುಲ್ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ಗೆ ತೆರಳಲಿದ್ದು ಆರಂಭಿಕ ಹಂತದ ಐಪಿಎಲ್ ಪಂದ್ಯಾವಳಿಗೆ ಅನುಮಾನ ಎನ್ನಲಾಗಿತ್ತು. ಆದರೆ ರಾಹುಲ್ ಲಂಡನ್ಗೆ ತೆರಳದೆ ಎನ್ಸಿಎಯಲ್ಲಿದ್ದಾರೆ. ಅವರು ಗಾಯದಿಂದ ಚೇತರಿಕೆ ಕಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ರಾಹುಲ್ ಗಾಯಗೊಂಡು ಸಂಪೂರ್ಣವಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ಮೂಲಕ ಕ್ರಿಕೆಟ್ ಕಮ್ಬ್ಯಾಕ್ ಮಾಡಿದ್ದರು. ಪಾಕಿಸ್ತಾನ ವಿರುದ್ಧ ಕಣಕ್ಕಿಳಿದಿದ್ದ ಅಂದಿನ ಪಂದ್ಯದಲ್ಲಿ ರಾಹುಲ್ ಶತಕ ಬಾರಿಸಿ ಮಿಂಚಿದ್ದರು. ಏಕದಿನ ವಿಶ್ವಕಪ್ನಲ್ಲಿಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಸದ್ಯ ಮಾಹಿತಿ ಪ್ರಕಾರ ರಾಹುಲ್ ಐಪಿಎಲ್ ಆಡುವುದು ನಿಶ್ಚಿತ.
ಇದನ್ನೂ ಓದಿ IPL 2024: ಟಾಟಾ ಐಪಿಎಲ್ 2024ಗಾಗಿ ಕೈಜೋಡಿಸಿದ ಜಿಯೋ ಸಿನಿಮಾ, ಎಂ.ಎಸ್.ಧೋನಿ; ಹೊಸ ಅವತಾರದಲ್ಲಿ ಕೂಲ್ ಕ್ಯಾಪ್ಟನ್!
2024ರ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಅನೌನ್ಸ್ ಆಗಿದೆ. ಮೊದಲ 17 ದಿನದ ವೇಳಾಪಟ್ಟಿಯನ್ನು ಬಿಸಿಸಿಐ ಕಳೆದ ವಾರ ಪ್ರಕಟಿಸಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಲಕ್ನೋ(lucknow super giants) ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 24ರಂದು ರಾಜಸ್ಥಾನ್ ವಿರುದ್ಧ ಆಡಲಿದೆ.
ಲಕ್ನೋ ತಂಡ
ಕೆ.ಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್(ಉಪ ನಾಯಕ), ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಶಮರ್ ಜೋಸೆಫ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್, ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆ್ಯಶ್ಟನ್ ಟರ್ನರ್, ಡೇವಿಡ್ ವಿಲ್ಲಿ, ಮೊಹಮ್ಮದ್ ಅರ್ಷದ್ ಖಾನ್.