ಬೆಂಗಳೂರು: ಏಷ್ಯಾಕಪ್ ಟೂರ್ನಿ(Asia Cup) ಆರಂಭಕ್ಕೆ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಬುಧವಾರದಿಂದ(ಆಗಸ್ಟ್ 30) ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ(Team India) ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಸಂಪೂರ್ಣ ಫಿಟ್ ಆಗಿದ್ದು ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್ ಅವರ ಕಮ್ಬ್ಯಾಕ್ನಿಂದ ಬಿಸಿಸಿಸಿಐ ನಿಟ್ಟುಸಿರು ಬಿಟ್ಟಿದೆ.
ಸತತ ಮೂರು ದಿನಗಳಿಂದ ಕಠಿಣ ಅಭ್ಯಾಸ
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಯಲ್ಲಿ ಕಳೆದ ಮೂರು ದಿನಗಳಿಂದ ಕಠಿಣ ಕೀಪಿಂಗ್, ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಕೆ.ಎಲ್ ರಾಹುಲ್ ಆಡಲು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಎನ್ಸಿಎ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ರಾಹುಲ್ ಅವರು ಕೀಪಿಂಗ್ ಅಭ್ಯಾಸ ನಡೆಸುವ ಫೋಟೊಗಳು ಕೂಡ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು. ಸದ್ಯ ರಾಹುಲ್ ಅವರು ಫಿಟ್ ಆಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ಏಷ್ಯಾಕಪ್‌ಗೆ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ತಂಡ ಪ್ರಕಟಿಸುವ ವೇಳೆ ರಾಹುಲ್ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲ. ಹೀಗಾಗಿ ಆರಂಭಿಕ ಕೆಲ ಪಂದ್ಯಗಳಲ್ಲಿ ಅವರು ಆಡುವುದು ಅನುಮಾನ ಎಂದಿದ್ದರು. ಆದರೆ ರಾಹುಲ್ ಅವರ ಪ್ರಗತಿ ಕಂಡಿರುವ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಬಹುತೇಖ ಖಚಿತವಾಗಿದೆ. ಇಶಾನ್ ಕಿಶನ್ ಮೀಸಲು ವಿಕೆಟ್ ಕೀಪರ್ ಆಗಿದ್ದರೂ ಗಾಯದಿಂದ ಚೇತರಿಕೆ ಕಾಣುತ್ತಿರುವ ರಾಹುಲ್ಗೆ ಕೀಪಿಂಗ್ ಅಭ್ಯಾಸ ಮಾಡಿಸುತ್ತಿರುವುದನ್ನು ನೋಡುವಾಗ ತಂಡದಲ್ಲಿ ರಾಹುಲ್ ಅವರ ಪಾತ್ರ ಎಷ್ಟರ ಮಟ್ಟಿಗೆ ಇದೆ ಎಂದು ತಿಳಿಯುತ್ತದೆ. ಪಾಕ್ ವಿರುದ್ಧ ಅವರು ಕೀಪಿಂಗ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ Asia Cup 2023: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಒಲಿದ ಅದೃಷ್ಟ, ಇಲ್ಲಿದೆ ಪಟ್ಟಿ
ಬ್ಯಾಟಿಂಗ್ ಕ್ರಮಾಂಕ ತಿಳಿದಿಲ್ಲ
ರಾಹುಲ್ ಅವರು ಮೂಲತ ಆರಂಭಿಕ ಆಟಗಾರನಾಗಿದ್ದಾರೆ. ಆದರೆ ಶುಭಮನ್ ಗಿಲ್ ಅವರು ಆರಂಭಿಕನಾಗಿ ಯಶಸ್ಸು ಪಡೆದಿರುವ ಕಾರಣ ರೋಹಿತ್ ಜತೆ ಗಿಲ್ ಅವರೇ ಇನಿಂಗ್ಸ್ ಆರಂಭಿಸುವುದು ಖಚಿತ. ಹೀಗಾಗಿ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಅನಿವಾರ್ಯತೆ ಇದೆ. ನಾಲ್ಕನೇ ಕ್ರಮಾಂಕಕ್ಕೆ ಅಯ್ಯರ್ ಫಿಟ್ ಆಗಿರುವ ಕಾರಣ ರಾಹುಲ್ ಈ ಬಾರಿ ಫಿನಿಶಿಂಗ್ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಕಳೆದ 2019 ಏಕದಿನದಲ್ಲಿ ರಾಹುಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಅಲ್ಲದೆ ಈ ಕ್ರಮಾಂಕದಲ್ಲಿ ಒಂದು ಶತಕವನ್ನು ಬಾರಿಸಿದ್ದರು.
ಐಪಿಎಲ್ ವೇಳೆ ಗಾಯ
31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.