ಬೆಂಗಳೂರು: ಏಷ್ಯಾಕಪ್ಗೆ(Asia Cup 2023) ಭಾರತ ತಂಡ ಪ್ರಕಟಗೊಂಡಿದ್ದರೂ. ಬಿಸಿಸಿಐ(BCCI) ಮತ್ತು ಆಯ್ಕೆ ಸಮಿತಿಗೆ ಕೆ.ಎಲ್ ರಾಹುಲ್(KL Rahul) ಅವರ ಫಿಟ್ನೆಸ್(kl rahul fitness) ವಿಚಾರವೇ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ತಂಡ ಪ್ರಕಟಿಸುವ ವೇಳೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್(Ajit Agarkar) ಅವರು ರಾಹುಲ್ ಗಾಯದಿಂದ ಚೇತರಿಕೆ ಕಂಡಿದ್ದಾರೆ. ಆದರೆ ಅವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದಿದ್ದರು. ಇದೀಗ ಅವರು ಇಡೀ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅವರು ಫಿಟ್ನೆಸ್ ಪರೀಕ್ಷೆಯಾದ ಯೋ ಯೋ ಟೆಸ್ಟ್ನಲ್ಲಿ ಪಾಲ್ಗೊಳ್ಳದ ಕಾರಣ ಈ ಅನುಮಾನ ಬಂದಿದೆ.
ಎಲ್ಲ ಆಟಗಾರರು ಕೂಡ ಯೋ-ಯೋ ಟೆಸ್ಟ್ಗೆ ಒಳಪಟ್ಟರೂ ರಾಹುಲ್ ಮಾತ್ರ ಈ ಟೆಸ್ಟ್ನಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ. ಇದು ಕಠಿಣ ಫಿಟ್ನೆಸ್ ಪರೀಕ್ಷೆಯಾಗಿದ್ದು ಇಲ್ಲಿ ನಿಗದಿತ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸಬೇಕಿದೆ. ವೇಗವಾಗಿ ಓಡಲು ಸಾಧ್ಯವಾಗದ ಕಾರಣ ರಾಹುಲ್ ಅವರು ಈ ಪರೀಕ್ಷೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಆಗಸ್ಟ್ ಮೊದಲ ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಯಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸ ನಡೆಸಿದ್ದರು. ಈ ಹಿನ್ನಲೆ ಅವರನ್ನು ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿತ್ತು.
ರಾಹುಲ್ ಆಯ್ಕೆಗೆ ವಿರೋಧ
ಕೆ.ಎಲ್ ರಾಹುಲ್ ಅವರನ್ನು ಈ ಮಹತ್ವದ ಟೂರ್ನಿಗೆ ಆಯ್ಕೆ ಮಾಡಬಾರದು ಎಂದು ಅನೇಕ ಮಾಜಿ ಆಟಗಾರರು ಬಿಸಿಸಿಐಗೆ ಸಲಹೆ ನೀಡಿದ್ದರು. ಆದರೂ ಕೂಡ ಅವರನ್ನು ಆಯ್ಕೆ ಮಾಡಲಾಗಿತ್ತು. ಗಾಯದಿಂದ ಚೇತರಿಕೆ ಕಂಡ ತಕ್ಷಣ ಹಿಂದಿನ ಫಾರ್ಮ್ಗೆ ಮರಳುವುದು ಕಷ್ಟ. ಹೀಗಾಗಿ ಅವರನ್ನು ಮಹತ್ವದ ಟೂರ್ನಿಯಲ್ಲಿ ಆಡಿಸುವ ಬದಲು ದ್ವಿಪಕ್ಷೀಯ ಸರಣಿಯಲ್ಲಿ ಆಡಿಸಿ ಬಳಿಕ ಮಹತ್ವದ ಟೂರ್ನಿಗೆ ಅವಕಾಶ ನೀಡಿದರೆ ಉತ್ತಮ ಎಂದು ಹೇಳಿದ್ದರು. ಒಟ್ಟಾರೆ ಅವಸರದಲ್ಲಿ ಅವರನ್ನು ಆಯ್ಕೆ ಮಾಡಿದ ಕುರಿತು ಇದೀಗ ಆಯ್ಕೆ ಸಮಿತಿ ಚಿಂತೆಯಲ್ಲಿ ಮುಳುಗಿದೆ.
ಅಯ್ಯರ್ ಫಿಟ್
ಬೆನ್ನು ನೋವಿನಿಂದ ಚೇತರಿಕೆ ಕಂಡ ಶ್ರೇಯಸ್ ಅಯ್ಯರ್ ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ಗುರುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ 199 ರನ್ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಬ್ಯಾಟಿಂಗ್ ಕಂಡು ಬಿಸಿಸಿಐ ತಕ್ಕ ಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ.
ಇದನ್ನೂ ಓದಿ KL Rahul : ತಂಡಕ್ಕೆ ಆಯ್ಕೆಗೊಂಡರೂ ರಾಹುಲ್ ತಂಡದಲ್ಲಿ ಸ್ಥಾನ ಪಡೆಯೋದು ಡೌಟು?
ಏಷ್ಯಾಕಪ್ ಟೂರ್ನಿ ಆಗಸ್ಟ್ 30 ರಿಂದ ಆರಂಭವಾಗಲಿದೆ. ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಸೆಪ್ಟಂಬರ್ 2 ರಂದು ಲಂಕಾದ ಕ್ಯಾಂಡಿಯಲ್ಲಿ ಸೆಣಸಾಟ ನಡೆಸಲಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).