ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ(Rahul To Join RCB) ಸೇರುವುದು ಬಹುತೇಕ ಖಚಿತ ಎನ್ನುವ ಮಾಹಿತಿ ಹೊರಬಿದ್ದಿದೆ. ಹೌದು, ರಾಹುಲ್ ಲಕ್ನೋ ತಂಡ ತೊರೆಯಲಿರುವ ಸುಳಿವನ್ನು ಲಕ್ನೋ ತಂಡದ ಸಹ ಆಟಗಾರ ಅಮೀತ್ ಮಿಶ್ರಾ ಬಿಟ್ಟುಕೊಟ್ಟಿದ್ದಾರೆ.
ರಾಹುಲ್ ಕೂಡ ಆರ್ಸಿಬಿ ಪರ ಆಡುವ ಬಯಕೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ಇದೇ ವರ್ಷ ನಡೆದಿದ್ದ ಐಪಿಎಲ್ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ಬೇಸರಗೊಂಡ ರಾಹುಲ್ ಮುಂದಿನ ಆವೃತ್ತಿಯಲ್ಲಿ ಈ ತಂಡದ ಪರ ಆಡುವುದು ಅನುಮಾನ.
ರಾಹುಲ್ ಆರ್ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕೇಳಿದ್ದೇ ತಡ ಕನ್ನಡಿಗರು ಮತ್ತು ಆರ್ಸಿಬಿ ಅಭಿಮಾನಿಗಳು ಆರ್ಸಿಬಿ ಜೆರ್ಸಿಯಲ್ಲಿ ರಾಹುಲ್ ಅವರ ಫೋಟೊ ಎಡಿಟ್ ಮಾಡಿ ತವರಿಗೆ ಸ್ವಾಗತ ಎನ್ನುವ ಪೋಸ್ಟರ್ ಶೇರ್ ಮಾಡಲಾರಂಭಿಸಿದ್ದಾರೆ. ಈ ಪೋಸ್ಟರ್ಗಳು ವೈರಲ್ ಆಗುತ್ತಿವೆ.
ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) 10 ವಿಕೆಟ್ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್ ರಾಹುಲ್(KL Rahul) ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ರಾಹುಲ್ ಕೂಡ ಬೇಸರಗೊಂಡಿದ್ದರು. ಇದೇ ಕಾರಣಕ್ಕೆ ರಾಹುಲ್ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ RCB: ಆರ್ಸಿಬಿ ಕಪ್ ಗೆಲ್ಲದಿರಲು ನೈಜ ಕಾರಣ ತಿಳಿಸಿದ ತಂಡದ ಮಾಜಿ ಆಟಗಾರ
ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯಲಿದೆ. (IPL 2025) 18ನೇ ಆವೃತ್ತಿಯಲ್ಲಿ ಬೆಂಗಳೂರು ತಂಡದಲ್ಲಿ ಕೂಡ ದೊಡ್ಡ ಬದಲಾವಣೆಯೊಂದು ಸಂಭವಿಸುವ ಮುನ್ಸೂಚನೆಯೊಂದು ಲಭಿಸಿದೆ. ಈ ಹಿಂದೆ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ ಅವರನ್ನು ಕೈ ಬಿಟ್ಟು ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli)ಗೆ ಮತ್ತೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಮೂರು ಸೀಸನ್ನಲ್ಲಿ ಡುಪ್ಲೆಸಿಸ್ ಆರ್ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್ ಮೂಲಕ 700ಕ್ಕೂ ಅಧಿಕ ರನ್ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್ ಎನಿಸಿಕೊಂಡಿದ್ದರು.