ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಮೊದಲ ಟೆಸ್ಟ್‌ನಿಂದ ಹೊರ ಬಿದ್ದಿದ್ದು, ಕನ್ನಡಿಗ ಕೆ.ಎಲ್. ರಾಹುಲ್(KL Rahul) ಮೊದಲ ಪಂದ್ಯಕ್ಕೆ ನಾಯಕತ್ವ ನಿಭಾಯಿಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಜತೆಗೆ ರೋಹಿತ್ ಸ್ಥಾನಕ್ಕೆ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆಮಾಡಲಾಗಿದೆ.
ಬಾಂಗ್ಲಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಹೆಬ್ಬೆರಳಿಗೆ ಗಾಯಮಾಡಿಕೊಂಡು ರೋಹಿತ್ ಅಂತಿಮ ಏಕ ದಿನ ಪಂದ್ಯದಿಂದ ಹೊರಗುಳಿದ್ದರು. ಗಾಯದ ಬಳಿಕ ರೋಹಿತ್ ಹೆಚ್ಚಿನ ಚಿಕಿತ್ಸೆಗಾಗಿ ಮುಂಬಯಿಗೆ ಆಗಮಿಸಿದ್ದರು. ಇದೀಗ ರೋಹಿತ್ ಸಂಪೂರ್ಣ ಚೇತರಿಸದ ಕಾರಣ ಡಿಸೆಂಬರ್ 14ರಂದು ಆರಂಭವಾಗಲಿರುವ ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ಪ್ರಕಟಿಸಿದೆ.
ರೋಹಿತ್ ಅಲಭ್ಯದ ಕಾರಣ ಭಾರತ ‘ಎ’ ತಂಡವನ್ನು ಮುನ್ನಡೆಸಿದ್ದ ಅನುಭವಿ ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್ ಅವರನ್ನು ಬದಲಿ ಆಟಗಾರನನ್ನಾಗಿ ಮೊದಲ ಟೆಸ್ಟ್‌ಗೆ ಸೇರಿಸಲಾಗಿದೆ. ಜತೆಗೆ ಗಾಯಾಳು ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಸ್ಥಾನದಲ್ಲಿ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡ ಸೇರಿದ್ದಾರೆ. ಸದ್ಯ ಗಾಯದಿಂದ ಚೇತರಿಕೆ ಕಾಣುತ್ತಿರುವ ರೋಹಿತ್ ಅಂತಿಮ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅಂತಿಮ ಏಕದಿನ ಪಂದ್ಯದಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ ಕೆ.ಎಲ್. ರಾಹುಲ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಮೊದಲ ಟೆಸ್ಟ್ನಲ್ಲಿಯೂ ಇವರ ನಾಯತ್ವದಲ್ಲಿ ತಂಡ ಗೆಲ್ಲುವ ನಿರೀಕ್ಷೆ ಇದೆ.
ಇದನ್ನೂ ಓದಿ | IND VS BAN | ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಇನ್ನೂ 6 ಪಂದ್ಯ ಗೆಲ್ಲಬೇಕಿದೆ ಟೀಮ್ ಇಂಡಿಯಾ!