ಮುಂಬಯಿ: ಭಾರತ ತಂಡ ಭಾನುವಾರ ನಡೆದಿದ್ದ ಏಕದಿನ(ICC Cricket World Cup 2023) ವಿಶ್ವಕಪ್ ಫೈನಲ್(India vs Australia, Final) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳಿಂದ ಸೋತು ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಪಂದ್ಯ ಮುಗಿದು ನಾಲ್ಕು ದಿನ ಕಳೆದರೂ ಈ ಸೋಲು ಈಗಲೂ ಕೂಡ ಕಾಡುತ್ತಿದೆ ಎಂದು ಕೆ.ಎಲ್ ರಾಹುಲ್(KL Rahul) ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಗುರುವಾರ ಪೋಸ್ಟ್ ಮಾಡಿದ್ದಾರೆ.
ಕೆ.ಎಲ್ ರಾಹುಲ್ ಅವರು ತಮ್ಮ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಫೈನಲ್ ಪಂದ್ಯಕ್ಕೆ ಸಂಬಂಧಿಸಿದ 3 ಫೋಟೋಗಳು ಮತ್ತು ಒಡೆದ ಹೃದಯದ ಎಮೋಜಿ ಹಾಕುವ ಮೂಲಕ ಫೈನಲ್ ಪಂದ್ಯದ ಸೋಲಿನಿಂದ “ಇನ್ನೂ ನೋವಿದೆ” ಎಂದು ಬರೆದುಕೊಂಡಿದ್ದಾರೆ.
still hurts… 💔 pic.twitter.com/yRb2JPkelP
— K L Rahul (@klrahul) November 23, 2023
ಟೂರ್ನಿಯಲ್ಲಿ ಬ್ಯಾಟಿಂಗ್ ಅಲ್ಲದೆ ವಿಕೆಟ್ ಕೀಪಿಂಗ್‌ನಲ್ಲೂ ಗಮನ ಸೆಳೆದಿದ್ದ ಕೆಎಲ್ ರಾಹುಲ್ 11 ಪಂದ್ಯಗಳಿಂದ 75 ಸರಾಸರಿಯಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳೊಂದಿಗೆ 452 ರನ್ ಗಳಿಸಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್ ಆಗಿದ್ದರು. ಅಲ್ಲದೆ ಫೈನಲ್ ಪಂದ್ಯದಲ್ಲಿ 66 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು.
ಇದನ್ನೂ ಓದಿ Rohit vs Virat: ರೋಹಿತ್,ಕೊಹ್ಲಿ ಟಿ20 ಕ್ರಿಕೆಟ್ ಯುಗಾಂತ್ಯ?; ಬಿಸಿಸಿಐ ನಿಲುವೇನು?
ಭಾರತಕ್ಕೆ ಸೋಲಿನ ಆಘಾತ
ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 137 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.
ಟ್ರಾವಿಸ್ ಹೆಡ್ ಅವರು ಫೈನಲ್ ಪಂದ್ಯದಲ್ಲಿ ಭಾರತೀಯ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 15 ಮನಮೋಹಕ ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 120 ಎಸೆತಗಳಲ್ಲಿ 137 ರನ್ ಬಾರಿಸಿ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2ನೇ ಬಾರಿಯೂ ವಿಫಲ
ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಟೀಮ್ ಇಂಡಿಯಾದ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಏಕ ದಿನ ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್ಗಳಿಂದ ಸೋಲು ಕಂಡಿತ್ತು.