ಬೆಂಗಳೂರು: ಏಷ್ಯಾಕಪ್ ವೇಳೆ ತಂಡಕ್ಕೆ ಮರಳಬಹುದೆಂದು ನಿರೀಕ್ಷೆ ಮಾಡಿದ್ದ ಕೆ.ಎಲ್ ರಾಹುಲ್ ಅವರ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ರಾಹುಲ್ಗೆ ಹೆಚ್ಚಿನ ಸಮಯ ಬೇಕಿದೆ ಹೀಗಾಗಿ ಅವರು ಏಷ್ಯಾಕಪ್ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ. ಬೆನ್ನು ನೋವಿನಿಂದ ಚೇತರಿಕೆ ಕಾಣುತ್ತಿರುವ ಶ್ರೇಯಸ್ ಅಯ್ಯರ್(Shreyas Iyer) ಕೂಡ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಗಾಯದಿಂದ ಸಂಪೂರ್ಣ ಚೇತರಿಕೆ ಕಂಡು ಅಭ್ಯಾಸ ನಡೆಸುತ್ತಿದ್ದರೂ. ಅವರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಏಕದಿನ ವಿಶ್ವಕಪ್ಗೆ ಕೆಲವೇ ದಿನಗಳು ಬಾಕಿ ಇರುವಾಗ ಅವಸರ ಮಾಡಿ ಇವರನ್ನು ಆಡಿಸದರೆ ಮತ್ತೆ ಗಾಯಗಳಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಇನ್ನೂ ಕೆಲ ದಿನಗಳ ಫಿಟ್ನೆಸ್ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅವರು ಏಷ್ಯಾ ಕಪ್ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಸದ್ಯ ಎನ್ಸಿಎಯಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸದಲ್ಲಿ ತೊಡಗಿರುವ ರಾಹುಲ್ ಮತ್ತು ಅಯ್ಯರ್ ಅವರು ಸೆಪ್ಟಂಬರ್ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ್ಲಲಿ ಆಡುವುದು ಖಚಿತ ಎಂದು ತಿಳಿದುಬಂದಿದೆ. ಅಲ್ಲಿಯ ವರೆಗೆ ಈ ಉಭಯ ಆಟಗಾರರು ಯಾವುದೇ ಕ್ರಿಕೆಟ್ ಸರಣಿಯಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ವಿಶ್ವಕಪ್ನಲ್ಲಿ ಈ ಆಟಗಾರರ ಪ್ರದರ್ಶನ ಭಾರತ ತಂಡಕ್ಕೆ ಪ್ರಮುಖವಾಗಿದೆ. ಹೀಗಾಗಿ ಬಿಸಿಸಿಐ ಅವರ ಮೇಲೆ ವಿಶೇಷ ಕಾಳಜಿ ವಹಿಸಿಕೊಂಡಿದೆ.
ಇದನ್ನೂ ಓದಿ KL Rahul: ರಾಹುಲ್ ಕಮ್ಬ್ಯಾಕ್ಗೆ ವೇದಿಕೆ ಸಜ್ಜು; ಈ ಸರಣಿಯಲ್ಲಿ ಆಡುವುದು ಖಚಿತ
ರಾಹುಲ್ ಅವರು ಬುಧವಾರ ಕೀಪಿಂಗ್ ಮತ್ತು ಬ್ಯಾಟಿಂಗ್ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಚೇತರಿಕೆಯ ಅಪ್ಡೇಡ್ ನೀಡಿದ್ದರು. 31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.