ಬೆಂಗಳೂರು: 16ನೇ ಐಪಿಎಲ್ನ ಲೀಗ್ ಪಂದ್ಯದ ವೇಳೆ ಕಾಲಿನ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್(KL Rahul) ಅವರ ಕಮ್ಬ್ಯಾಕ್ಗೆ ವೇದಿಕೆ ಸಿದ್ದವಾಗಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ(Asia Cup 2023) ಅವರು ಆಡುವುದು ಖಚಿತವಾಗಿದೆ. ರಾಹುಲ್ ಅವರು ಬುಧವಾರ ಕೀಪಿಂಗ್ ಮತ್ತು ಬ್ಯಾಟಿಂಗ್ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಈ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಸದ್ಯ ರಾಹುಲ್ ಬೆಂಗಳೂರಿನಲ್ಲಿರುವ(Bengaluru) ಎನ್‌ಸಿಎಯಲ್ಲಿ(National Cricket Academy) ಪುನರ್ವಸತಿ ನಡೆಸುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗದ ವೇಳೆ ರಾಹುಲ್ ಅವರು ತಂಡಕ್ಕೆ ಶೀಘ್ರದಲ್ಲೇ ಮರಳುವುದು ಅನುಮಾನ ಎನ್ನಲಾಗಿತ್ತು. ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ಏಷ್ಯಾಕಪ್ನಲ್ಲಿ ರಾಹುಲ್ ಆಡಲಿದ್ದಾರೆ, ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದಯ ತಿಳಿಸಿದ್ದಾರೆ. ಮಾಜಿ ಅನುಭವಿ ಆಟಗಾರ ಸುನೀಲ್ ಗವಾಸ್ಕರ್ ಕೂಡ ರಾಹುಲ್ ಆಗಮನದಿಂದ ತಂಡದ ಬ್ಯಾಟಿಂಗ್ ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಅವರು ನೆಟ್ಸ್ನಲ್ಲಿ ಕಠಿಣ ಬ್ಯಾಟಿಂಗ್ ಮತ್ತು ಡೈವ್ ಹಾರುವ ಮೂಲಕ ಕೀಪಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಕಂಡ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಕಮ್ಬ್ಯಾಕ್ಗೆ ಎದುರು ನೋಡುತ್ತಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಪಂತ್ ಅನುಪಸ್ಥಿತಿಯಲ್ಲಿ ರಾಹುಲ್ ಅವರು ಏಕದಿನ ವಿಶ್ವಕಪ್ನಲ್ಲಿ(ODI World Cup) ಕೀಪಿಂಗ್ ಹೊಣೆ ಹೊರಲಿದ್ದಾರೆ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಕೀಪರ್ ಆಗಿದ್ದರೂ ಮೊದಲ ಆಯ್ಕೆ ರಾಹುಲ್ ಆಗಿದ್ದಾರೆ.
ಇದನ್ನೂ ಓದಿ KL Rahul: ಪತ್ನಿಯ ರ‍್ಯಾಂಪ್ ವಾಕ್ ಕಂಡು ರೊಮ್ಯಾಂಟಿಕ್ ಕಮೆಂಟ್ ಮಾಡಿದ ಕೆ.ಎಲ್ ರಾಹುಲ್
ರಾಹುಲ್ ಜತೆಗೆ ಬೆನ್ನು ನೋವಿನಿಂದ ಬಳಲಿದ ಶ್ರೇಯಸ್ ಅಯ್ಯರ್(Shreyas Iyer) ಕೂಡ ಏಷ್ಯಾಕ್ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ರಾಹುಲ್ ಅವರು ಈ ಹಿಂದೆಯೂ ಹಲವು ಪಂದ್ಯಗಳಲ್ಲಿ ಭಾರತ ಪರ ಕೀಪಿಂಗ್ ನಡೆಸಿ ಯಶಸ್ಸು ಸಾಧಿಸಿದ್ದಾರೆ. ವಿಕೆಟ್ ಕೀಪರ್ ಆಗಿ 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
31 ವರ್ಷದ ರಾಹುಲ್ ಮೇ 1ರಂದು ನಡೆದ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಟಗಾರರ ಸಹಾಯದಿಂದ ಮೈದಾನದಿಂದ ಹೊರಕ್ಕೆ ಕೊಂಡೊಯ್ಯಲಾಗಿತ್ತು. ಗಾಯದ ಪ್ರಮಾಣ ಗಂಭಿರವಾದ ಪರಿಣಾಮ ಅವರಿಗೆ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು.