Site icon Vistara News

KL Rahul: ಧೋನಿ ನಾಯಕತ್ವದ ದಾಖಲೆ ಮುರಿದ ಕನ್ನಡಿಗ ಕೆ.ಎಲ್ ರಾಹುಲ್​

KL Rahul

ಜೊಹಾನ್ಸ್​ಬರ್ಗ್​: ದಕ್ಷೀಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ತಂಡದ ನಾಯಕ, ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರು ಈ ಗೆಲುವಿನ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ನಾಯಕನಾಗಿ ರಾಹುಲ್​ ಅವರು ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ದಾಖಲೆಯನ್ನು ಮುರಿದಿದ್ದಾರೆ. ಧೋನಿ ನಾಯಕನಾಗಿ 2013ರಲ್ಲಿ ಸತತವಾಗಿ 9 ಪಂದ್ಯಗಳನ್ನು ಗೆದ್ದಿದ್ದರು. ಇದೀಗ ರಾಹುಲ್ ಈ ದಾಖಲೆಯನ್ನು ಮುರಿದಿದ್ದಾರೆ.

ದಾಖಲೆಯ ಗೆಲುವು ರೋಹಿತ್​ ಶರ್ಮ ಹೆಸರಿನಲ್ಲಿ. ಅವರು 2019 ರಿಂದ 2022 ರವರೆಗೆ ನಾಯಕನಾಗಿ ಆಡಿದ ಎಲ್ಲ 19 ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದರು. ಇದು ಸದ್ಯ ದಾಖಲೆಯಾಗಿಯೇ ಉಳಿದಿದೆ. ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿಯೂ ರೋಹಿತ್​ ನಾಯಕತ್ವದಲ್ಲಿ ಭಾರತ ತಂಡ ಸತತ 10 ಗೆಲುವು ಸಾಧಿಸಿತ್ತು.

ಇದನ್ನೂ ಓದಿ Sai Sudharsan: ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಸಾಯಿ ಸುದರ್ಶನ್

ಮೊದಲ ನಾಯಕ

ರಾಹುಲ್​ ಈ ಗೆಲುವಿನೊಂದಿಗೆ ಇನ್ನೊಂದು ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ. ಈ ದಾಖಲೆ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಹೌದು, ದಕ್ಷಿಣ ಆಫ್ರಿಕಾದಲ್ಲಿ ಪಿಂಕ್ ಏಕದಿನ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ಈ ಹಿಂದೆ ಧೋನಿ, ಕೊಹ್ಲಿ, ರೋಹಿತ್​ ಸೇರಿ ಯಾವೊಬ್ಬ ಭಾರತೀಯ ನಾಯಕನೂ ಇಂತಹ ಸಾಧನೆ ಮಾಡಿರಲಿಲ್ಲ. ಇದೀಗ ಈ ವಿಶೇಷ ದಾಖಲೆ ಕನ್ನಡಿಗನ ಪಾಲಾಗಿದೆ.

ಪಂದ್ಯ ಗೆದ್ದ ಭಾರತ

ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಅರ್ಶದೀಪ್​ ಸಿಂಗ್​ ಅವರು ಘಾತಕ ಬೌಲಿಂಗ್​ ದಾಳಿಯ ಮೂಲಕ ಆಘಾತವಿಕ್ಕಿದರು. ಅವರ ಬೌಲಿಂಗ್​ ದಾಳಿಗೆ ತಡೆಯೊಡ್ಡಿ ನಿಲ್ಲುವಲ್ಲಿ ವಿಫಲವಾದ ಹರಿಣ ಪಡೆ ತರಗೆಲೆಯಂತೆ ಉದುರಿ 27.3 ಓವರ್​ಗಳಲ್ಲಿ 116 ರನ್​ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಶ್ರೇಯಸ್​ ಅಯ್ಯರ್​(52) ಮತ್ತು ಪದಾರ್ಪಣ ಪಂದ್ಯವಾಡಿದ ಸಾಯಿ ಸುದರ್ಶನ್(ಅಜೇಯ 55) ಬಾರಿಸಿದ ಅರ್ಧಶತಕದ​ ನೆರವಿನಿಂದ 16.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 117 ರನ್​ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್​ 19 ಮಂಗಳವಾರ ನಡೆಯಲಿದೆ.

Exit mobile version