ಹರಾರೆ : ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ತಂಡ (IND vs ZIM ODI) ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ೧೦ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ದೀಪಕ್ ಚಾಹರ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ ತಲಾ ಮೂರು ವಿಕೆಟ್ ಪಡೆದು ಆತಿಥೇಯ ತಂಡವನ್ನು ೧೮೯ ರನ್‌ಗಳಿಗೆ ನಿಯಂತ್ರಣ ಮಾಡಿದರು. ಶಿಖರ್ ಧವನ್ (೮೧*) ಹಾಗೂ ಶುಬ್ಮನ್ ಗಿಲ್ (೮೨*) ಜೋಡಿಯ ಅರ್ಧ ಶತಕಗಳ ನೆರವಿನಿಂದ ಭಾರತ ಸುಲಭ ಜಯ ಸಾಧಿಸಿತ್ತು. ಇವೆಲ್ಲರೂ ಭಾರತ ಕ್ರಿಕೆಟ್ ತಂಡಗಳ ಮೆಚ್ಚುಗೆಗೆ ಪಾತ್ರವಾಗಿದೆ. ಏತನ್ಮಧ್ಯೆ, ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆ. ಎಲ್ ರಾಹುಲ್ ರಾಷ್ಟ್ರಗೀತೆ ಹಾಡುವ ವೇಳೆ ಮಾಡಿದ ವರ್ತನೆಯೂ ಮೆಚ್ಚುಗೆಗೆ ಪಾತ್ರವಾಗಿದೆ.
ಅದೇನೆಂದರೆ ಪಂದ್ಯಕ್ಕೆ ಮೊದಲು ಭಾರತ ಹಾಗೂ ಜಿಂಬಾಬ್ವೆ ತಂಡದ ಆಟಗಾರರು ರಾಷ್ಟ್ರಗೀತೆಗಾಗಿ ಸಾಲುಗಟ್ಟಿ ನಿಂತಿದ್ದರು. ಅಂತೆಯೇ ರಾಹುಲ್ ಕೂಡ ಟೀಮ್ ಇಂಡಿಯಾದ ಜತೆ ಸಾಲಾಗಿ ನಿಂತಿದ್ದರು. ಇನ್ನೇನು ಅವರು “ಜನಗಣಮನ ” ಆರಂಭವಾಗಬೇಕು ಎಂದ ತಕ್ಷಣ ಅವರು ಅದುವರೆಗೆ ಜಗಿಯುತ್ತಿದ್ದ ಚೂಯಿಂಗ್ ಅನ್ನು ಬಾಯಿಯಿಂದ ಹೊರ ತೆಗೆದು ಎಸೆದರು. ಈ ದೃಶ್ಯ ವಿಡಿಯೊ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೊವನ್ನು ಕ್ರಿಕೆಟ್ ಪ್ರೇಮಿಗಳು ವೀಕ್ಷಿಸಿದ್ದು, ರಾಹುಲ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಗೀತೆ ಆರಂಭವಾಗುವ ವೇಳೆ ಅವರು ತೋರಿದ ಗೌರವ ಇತರರಿಗೂ ಮಾದರಿ ಎಂದು ಸಾಕಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | IND vs ZIM ODI | ಧವನ್- ಗಿಲ್ ಜೋಡಿಯ ಕಮಾಲ್, ಭಾರತಕ್ಕೆ 10 ವಿಕೆಟ್ ಭರ್ಜರಿ ಜಯ