Site icon Vistara News

KL Rahul: ಲಂಡನ್​ನಲ್ಲಿ ಚಿಕಿತ್ಸೆ; ಐಪಿಎಲ್ ಟೂರ್ನಿಯಿಂದ ಹೊರಬೀಳಲಿದ್ದಾರೆ ರಾಹುಲ್​!​

kl rahul

ಮುಂಬಯಿ: ತೊಡೆಗಳ ಸ್ನಾಯು ನೋವಿನಿಂದ ಬಳಲುತ್ತಿರುವ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಹೆಚ್ಚಿನ ಚಿಕಿತ್ಸೆಗೆ ಲಂಡನ್​ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಮುಂದಿನ ತಿಂಗಳಿನಿಂದ ಆರಂಭಗೊಳ್ಳಲಿರುವ ಐಪಿಎಲ್(IPL 2024)​ ಟೂರ್ನಿಗೂ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ ರಾಹುಲ್ ಅವರು ಲಂಡನ್​ನಲ್ಲಿ ಒಂದು ವಾರಗಳ ಚಿಕಿತ್ಸೆಗೆ ಒಳಪಡಲಿದ್ದಾರೆ ಎಂದು ತಿಳಿಸಿರುವುದುದಾಗಿ ಟೈಮ್ಸ್​ ನೌ ವರದಿ ಮಾಡಿದೆ. ಲಕ್ನೋ ಸೂಪರ್​ ಜೈಂಟ್ಸ್​ ತಂಡದ ನಾಯಕನಾಗಿರುವ ರಾಹುಲ್​ ಕಳೆದ ಆವೃತ್ತಿಯಲ್ಲಿಯೂ ಗಾಯಗೊಂಡು ಸಂಪೂರ್ಣವಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಮತ್ತೆ ಅವರು ಗಾಯದಿಂದಾಗಿ ಟೂರ್ನಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.

2024ರ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಅನೌನ್ಸ್‌ ಆಗಿದೆ. ಮೊದಲ 17 ದಿನದ ವೇಳಾಪಟ್ಟಿಯನ್ನು ಬಿಸಿಸಿಐ ಕಳೆದ ವಾರ ಪ್ರಕಟಿಸಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಲಕ್ನೋ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 24ರಂದು ರಾಜಸ್ಥಾನ್​ ವಿರುದ್ಧ ಆಡಲಿದೆ.

ಸಂಪೂರ್ಣ ಫಿಟ್​ ಆಗದ ಕಾರಣದಿಂದಾಗಿ ರಾಹುಲ್​ ಅವರನ್ನು ಮೂರನೇ ಟೆಸ್ಟ್​ನಿಂದ ಕೈಬಿಡಲಾಗಿತ್ತು. ದೇವದತ್ತ ಪಡಿಕ್ಕಲ್​ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. 4ನೇ ಟೆಸ್ಟ್​ಗೂ ರಾಹುಲ್​ ಫಿಟ್​ ಆಗದ ಕಾರಣ ಅವರನ್ನು ಈ ಪಂದ್ಯದಿಂದಲೂ ಕೈ ಬಿಡಲಾಗಿತ್ತು. ಇದೀಗ ಅಂತಿಮ ಟೆಸ್ಟ್​ಗೂ ಅವರು ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IPL 2024 : ಸಿಎಸ್​ಕೆ ತಂಡದ ಇನ್ನೊಬ್ಬ ಆಲ್​ರೌಂಡರ್​ ಗೆ ಗಾಯ; ಟೂರ್ನಿಗೆ ಮೊದಲೇ ಆಘಾತ

ರಾಹುಲ್ ಮೂರನೇ ಟೆಸ್ಟ್​ಗೂ ಮುನ್ನ​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫಿಟ್ನೆಸ್ ವರದಿ ಹೊರಬರುವ ಮೊದಲೇ ತಾವು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಪ್ರಕಟಿಸಿದ್ದರು. ಇದನ್ನು ಕಂಡ ಅವರ ಅಭಿಮಾನಿಗಳು ಮೂರನೇ ಟೆಸ್ಟ್ ಪಂದ್ಯಕ್ಕೆ ಪುನರಾಗಮನ ಮಾಡಲಿದ್ದಾರೆ ಎಂದು ಭಾವಿಸಿದ್ದರು. ಆದರೆ ಪಂದ್ಯ ಆರಂಭಕ್ಕೂ ಮುನ್ನ ಅವರು ಈ ಪಂದ್ಯದಿಂದ ಹೊರಬಿದ್ದಿದ್ದರು. ವೈದ್ಯರು, ತಜ್ಞರ ತಂಡ ಫಿಟ್​ನೆಸ್​ ಘೋಷಿಸುವ ಮೊದಲೇ ತಾವೇ ಫಿಟ್ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಸ್ವಯಂ ಘೋಷಣೆ ಮಾಡಿಕೊಂಡದ್ದು ಬಿಸಿಸಿಐ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಅಂತಿಮ ಟೆಸ್ಟ್​ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್.

Exit mobile version