ಮೀರ್ಪುರ್ : ಭಾರತ ಹಾಗೂ ಬಾಂಗ್ಲಾದೇಶ (INDvsBAN) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಆತಿಥೇಯ ತಂಡ ಎರಡನೇ ಇನಿಂಗ್ಸ್ನಲ್ಲಿ 231 ರನ್ಗಳಿಗೆ ಔಟಾದ ಬಳಿಕ 145 ರನ್ಗಳ ಗೆಲುವಿನ ಗುರಿಯೊಂದಿಗೆ ಬ್ಯಾಟ್ ಮಾಡಲು ಇಳಿದಿರುವ ಭಾರತ ಬಳಗ, ಮೂರನೇ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿದೆ. ಭಾರತದ ಗೆಲುವಿಗೆ ಇನ್ನೂ 100 ರನ್ಗಳು ಬೇಕಾಗಿದ್ದು ಆರು ವಿಕೆಟ್ಗಳು ಉಳಿದಿವೆ. ಏತನ್ಮಧ್ಯೆ, ಸಣ್ಣ ಗುರಿಯನ್ನು ಬೆನ್ನಟ್ಟಲು ಮುಂದಾದ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಸಣ್ಣ ಪುಟ್ಟ ಮೊತ್ತಕ್ಕೆ ಪೆವಿಲಿಯನ್ ಹಾದಿ ಹಿಡಿಯುವ ಮೂಲಕ ತಂಡಕ್ಕೆ ಸಂಕಷ್ಟ ತಂದೊಡ್ಡಿದ್ದಾರೆ. ಅವರಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯೂ ಒಬ್ಬರು. ಅವರು 22 ಎಸೆತಗಳನ್ನು ಎದುರಿಸಿ 1 ರನ್ ಬಾರಿಸಿ ಔಟಾಗಿದ್ದಾರೆ. ಕೊಹ್ಲಿ ಔಟಾದ ತಕ್ಷಣ ನೇರವಾಗಿ ಪೆವಿಲಿಯನ್ಗೆ ಮರಳುವ ಬದಲು ಫೀಲ್ಡರ್ಗಳ ಜತೆ ಜಗಳವಾಡಿಕೊಂಡು ಬಂದಿದ್ದಾರೆ.
ವಾಕ್ಸಮರ ನಡೆದಿರುವುದು ಭಾರತದ ಎರಡನೇ ಇನಿಂಗ್ಸ್ನ 19ನೇ ಓವರ್ನಲ್ಲಿ. ಮೆಹೆದಿ ಹಸನ್ ಎಸೆದ ಐದನೇ ಎಸೆತದಲ್ಲಿ ಕೊಹ್ಲಿ ಮೊಮಿನುಲ್ ಹಕ್ಗೆ ಸುಲಭ ಕ್ಯಾಚ್ ನೀಡಿದ್ದರು. ಕೊಹ್ಲಿ ಔಟಾಗುತ್ತಿದ್ದಂತೆ ಬಾಂಗ್ಲಾದೇಶದ ಫೀಲ್ಡರ್ಗಳು ಸಹಜವಾಗಿ ಅತಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಜೋರಾಗಿ ಅರಚಿ ಪರಸ್ಪರ ಖುಷಿ ಪಟ್ಟಿದ್ದಾರೆ.
ಒಂದು ಕಡೆ ಕಡಿಮೆ ಮೊತ್ತಕ್ಕೆ ಔಟಾದ ನಿರಾಸೆ. ಮತ್ತೊಂದು ಕಡೆಗೆ ಎದುರಾಳಿ ತಂಡದ ಗಲಾಟೆ. ಎರಡನ್ನೂ ಸಹಿಸಿಕೊಳ್ಳದ ವಿರಾಟ್ ಸ್ವಲ್ಪ ಹೊತ್ತು ಅಲ್ಲೇ ನಿಂತುಕೊಂಡಿದ್ದಾರೆ. ಬಳಿಕ ಬಾಂಗ್ಲಾದೇಶದ ನಾಯಕ ಶಕಿಬ್ ಅಲ್ ಹಸನ್ ಅವರತ್ತ ಹೋಗಿ ಕೈ ತೋರಿಸಿ ಜಗಳವಾಡಿದ್ದಾರೆ. ಹಸನ್ ಕೂಡ ಏನೋ ಹೇಳಲು ಯತ್ನಿಸಿದ್ದಾರೆ. ಬಳಿಕ ಅಂಪೈರ್ಗಳು ಸ್ಥಳಕ್ಕೆ ಬಂದು ಅವರ ಜಗಳ ನಿಲ್ಲಿಸಿದ್ದಾರೆ. ಬಳಿಕ ಅಲ್ಲಿಂದ ಬೈಯುತ್ತಲೇ ಕೊಹ್ಲಿ ನಿರ್ಗಮಿಸಿದ್ದಾರೆ.
ವಿರಾಟ್ ಕೊಹ್ಲಿ ಈ ವರ್ತನೆ ಕ್ರಿಕೆಟ್ ಪ್ರೇಮಿಗಳಿಗೆ ಹಿಡಿಸಿಲ್ಲ. ಹಿರಿಯ ಆಟಗಾರನಾಗಿದ್ದು, ಅನುಭವಿಯಾಗಿದ್ದು ಇಂಥದ್ದೆಲ್ಲ ಮಾಡಬಾರದಾಗಿತ್ತು ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿಗೆ ಶನಿವಾರ ಅತ್ಯಂತ ಕೆಟ್ಟ ದಿನ. ಯಾಕೆಂದರೆ ಅವರು ಫೀಲ್ಡಿಂಗ್ ವೇಳೆ ನಾಲ್ಕು ಕ್ಯಾಚ್ಗಳನ್ನು ಕೈ ಚೆಲ್ಲಿದ್ದರು. ಅದರಲ್ಲೊಂದು 73 ರನ್ ಬಾರಿಸಿದ ಬಾಂಗ್ಲಾ ಬ್ಯಾಟರ್ ಲಿಟನ್ ದಾಸ್ ಅವರದ್ದು. ಅವರು ಅರ್ಧ ಶತಕ ಬಾರಿಸದೇ ಹೋಗಿದ್ದರೆ ಟೀಮ್ ಇಂಡಿಯಾಗೆ ಇನ್ನಷ್ಟು ಕಡಿಮೆ ಮೊತ್ತದ ಸವಾಲು ಎದುರಾಗುತ್ತಿತ್ತು. ಕಠಿಣ ಪಿಚ್ನಲ್ಲಿ 145 ರನ್ಗಳ ಗುರಿ ಎದುರಾಗುತ್ತಿಲಿಲ್ಲ.
ಇದನ್ನೂ ಓದಿ | Cristiano Ronaldo | ಸೋಲಿನ ಸುಳಿಗೆ ಸಿಲುಕಿ ರೊನಾಲ್ಡೊಗೆ ಸಮಾಧಾನ ಹೇಳಿದ ವಿರಾಟ್ ಕೊಹ್ಲಿ