Site icon Vistara News

Naveen Ul Haq: ಕೊಹ್ಲಿ ಒಳ್ಳೇ ವ್ಯಕ್ತಿ; ದೋಸ್ತಿ ಬಳಿಕ ‘ಕಿಂಗ್’‌ ಬಗ್ಗೆ ನವೀನ್‌ ಉಲ್‌ ಹಕ್‌ ಹೇಳಿದ್ದೇನು?

Virat Kohli And Naveen Ul Haq

Kohli is a nice guy: Naveen Ul Haq Says After Hug And Hand Shake on Field

ನವದೆಹಲಿ: ಐಪಿಎಲ್‌ ಪಂದ್ಯದ ವೇಳೆ ಮೈದಾನದಲ್ಲಿಯೇ ಭಾರಿ ಸಂಘರ್ಷಕ್ಕೆ ಇಳಿದಿದ್ದ, ಅದಾದ ಬಳಿಕ ಎಲ್ಲಿಯೇ ಎದುರಾದರೂ ಮುಖ ತಿರುಗಿಸಿಕೊಂಡು ಹೋಗುತ್ತಿದ್ದ ವಿರಾಟ್‌ ಕೊಹ್ಲಿ (Virat Kohli) ಹಾಗೂ ಆಫ್ಘನ್‌ ವೇಗಿ ನವೀನ್‌ ಉಲ್‌ ಹಕ್‌ (Naveen Ul Haq) ಅವರು ಬುಧವಾರ (ಅಕ್ಟೋಬರ್‌ 11) ನಡೆದ ಭಾರತ-ಅಫಘಾನಿಸ್ತಾನ (IND vs AFG) ಪಂದ್ಯದ ವೇಳೆ ಮೈದಾನದಲ್ಲಿಯೇ ರಾಜಿ ಆಗಿದ್ದಾರೆ. ಇಬ್ಬರೂ ತಬ್ಬಿಕೊಂಡು, ಹ್ಯಾಂಡ್‌ ಶೇಕ್‌ ಮಾಡಿದ್ದು, ಪಂದ್ಯದ ಬಳಿಕವೂ ನಗುನಗುತ್ತ ಮಾತನಾಡಿದ್ದಾರೆ. ಇಬ್ಬರೂ ಕ್ರೀಡಾಸ್ಫೂರ್ತಿ ಮೆರೆದಿರುವುದಕ್ಕೆ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಕೊಹ್ಲಿ ಜತೆಗಿನ ರಾಜಿ ಕುರಿತು ನವೀನ್‌ ಉಲ್‌ ಹಕ್‌ ಮಾತನಾಡಿದ್ದು, “ಕೊಹ್ಲಿ ನಿಜವಾಗಿಯೂ ಒಳ್ಳೆಯ ವ್ಯಕ್ತಿ” ಎಂದಿದ್ದಾರೆ.

“ಕೊಹ್ಲಿ ನಿಜವಾಗಿಯೂ ತುಂಬ ಒಳ್ಳೆ ವ್ಯಕ್ತಿ ಹಾಗೂ ಅದ್ಭುತ ಆಟಗಾರ. ಮೈದಾನದಲ್ಲಿ ನಾವು ಕೈ ಕುಲುಕಿಸಿದೆವು. ಜಗಳ ಏನಿದ್ದರೂ ಮೈದಾನದಲ್ಲಿ ಮಾತ್ರ, ಮೈದಾನದ ಹೊರಗೆ ಯಾವುದೇ ಸಂಘರ್ಷ ಇರುವುದಿಲ್ಲ. ಆದರೆ, ಜನರೇ ನಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಅಭಿಮಾನಿಗಳು ವೈರತ್ವ ಸಾಧಿಸುತ್ತಾರೆ. ಆದರೆ, ವಿರಾಟ್‌ ಕೊಹ್ಲಿ ನನ್ನ ಜತೆ ಮಾತನಾಡುತ್ತ ಇಲ್ಲಿಗೇ ಬಿಡೋಣ ಎಂದರೂ. ನಾನು ಕೂಡ ಬಿಡೋಣ ಎಂದೆ. ಆಗ ಇಬ್ಬರೂ ಕೈ ಕುಲುಕಿ, ತಬ್ಬಿಕೊಂಡೆವು” ಎಂದು ಪಂದ್ಯದ ಬಳಿಕ ನವೀನ್‌ ಉಲ್‌ ಹಕ್‌ ಹೇಳಿದ್ದಾರೆ.

ಗೌತಮ್‌ ಗಂಭೀರ್‌ ಸಂತಸ

ವಿರಾಟ್‌ ಕೊಹ್ಲಿ ಹಾಗೂ ನವೀನ್‌ ಉಲ್‌ ಹಕ್‌ ದೋಸ್ತಿ ಬಗ್ಗೆ ಕಾಮೆಂಟರಿ ಮಾಡುವಾಗ ಗೌತಮ್‌ ಗಂಭೀರ್‌ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ನೀವು ಮೈದಾನದಲ್ಲಿ ಜಗಳ ಆಡುತ್ತೀರಿಯೇ ಹೊರತು ಮೈದಾನದ ಹೊರಗೆ ಅಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನ ತಂಡದ ಪರ ಹೋರಾಡುತ್ತಾನೆ. ಆತ್ಮಗೌರವ ಹಾಗೂ ಗೆಲುವಿಗಾಗಿ ಜಗಳಕ್ಕಿಳಿಯುತ್ತಾನೆ. ನೀವು ಯಾವ ದೇಶದವರೇ ಆಗಿರಿ, ಎಷ್ಟೇ ದೊಡ್ಡ ಆಟಗಾರನಾಗಿರಿ, ಗೆಲುವಿಗಾಗಿ ಮಾಡುವ ಹೋರಾಟ ದೊಡ್ಡದು. ವಿರಾಟ್‌ ಕೊಹ್ಲಿ ಹಾಗೂ ನವೀನ್‌ ಉಲ್‌ ಹಕ್‌ ಅವರು ಮತ್ತೆ ಒಂದಾಗಿದ್ದು ಖುಷಿ ತಂದಿದೆ. ಆದರೆ, ಜನರು ಸಾಮಾಜಿಕ ಜಾಲತಾಣಗಳಲ್ಲಿ, ಮೈದಾನದಲ್ಲಿ ಯಾವುದೇ ಆಟಗಾರನಿಗೆ ಟ್ರೋಲ್‌ ಮಾಡಬಾರದು” ಎಂದು ಗೌತಮ್‌ ಗಂಭೀರ್‌ ಅವರು ಕಾಮೆಂಟರಿ ಮಾಡುವಾಗ ಹೇಳಿದ್ದಾರೆ.

2023ರ ಮೇ 1 ರಂದು ಲಖನೌದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ವಾಗ್ವಾದ ನಡೆಸಿದ್ದರು ಈ ಪಂದ್ಯದಲ್ಲಿ ಆರ್‌ಸಿಬಿ 18 ರನ್‌ಗಳ ಜಯ ಸಾಧಿಸಿತ್ತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ನಡುವೆಯೂ ವಾಗ್ವಾದ ನಡೆದಿತ್ತು. ಆ ಬಳಿಕ ಗಂಭೀರ್ ಎಲ್ಲೇ ಕಾಣಿಸಿಕೊಂಡರು ಕೊಹ್ಲಿ ಅಭಿಮಾನಿಗಳ ಕೊಹ್ಲಿ ಕೊಹ್ಲಿ ಎಂದು ಕೂಗುವ ಮೂಲಕ ಗಂಭೀರ್ ಅವರನ್ನು ಕೆಣಕುತ್ತಿದ್ದಾರೆ. ನವೀನ್‌ ಉಲ್‌ ಹಕ್‌ ಅವರಿಗೂ ಇದೇ ಅನುಭವ ಆಗಿತ್ತು. ಈಗ ಕೊಹ್ಲಿಯು ರಾಜಿ ಮಾಡಿಕೊಂಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: IND vs AFG: ಕೊಹ್ಲಿ-ನವೀನ್‌ ರಾಜಿ ಆದರೂ ಮೈದಾನದಲ್ಲಿ ಭಾರಿ ಜಗಳ ಆಡಿದ ಫ್ಯಾನ್ಸ್!

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 272 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ ಇನ್ನೂ 90 ಎಸೆತಗಳು ಬಾರಿ ಇರುವಂತೆಯೇ 2 ವಿಕೆಟ್​ ನಷ್ಟಕ್ಕೆ 273 ರನ್ ಬಾರಿಸಿ ಗೆಲುವು ಸಾಧಿಸಿತು. ಬೌಲಿಂಗ್ ವೇಳೆ 39 ರನ್​ಗಳಿಗೆ 4 ವಿಕೆಟ್​ ಉರುಳಿಸಿದ ಜಸ್​ಪ್ರಿತ್​ ಬುಮ್ರಾ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Exit mobile version