Site icon Vistara News

Kohli plan: ಟೀಕೆಗಳಿಂದ ತಪ್ಪಿಸಿಕೊಳ್ಳಲು ಟಿವಿ ಮ್ಯೂಟ್‌ ಮಾಡುತ್ತೇನೆ ಎಂದ ವಿರಾಟ್‌

ನವದೆಹಲಿ: ಫಾರ್ಮ್‌ ಕಳೆದುಕೊಂಡಿರುವ ಆರ್‌ಸಿಬಿ ಆಟಗಾರ ವಿರಾಟ್‌ ಕೊಹ್ಲಿಯನ್ನು ಈಗ ಎಲ್ಲರೂ ಟೀಕೆ ಮಾಡುವವರೆ. ಅದರಲ್ಲೂ TATA IPLನ ಕಳೆದ 12 ಪಂದ್ಯಗಳಲ್ಲಿ ಮೂರು ಬಾರಿ ಮೊದಲ ಎಸೆತಕ್ಕೇ ಔಟಾಗಿ ಗೋಲ್ಡನ್‌ ಡಕ್‌ ಅಪಮಾನ ಎದುರಿಸಿದ ಬಳಿಕವಂತೂ ಎಲ್ಲರೂ ವಿರಾಟ್‌ ಕೊಹ್ಲಿಯನ್ನು ಪ್ರಶ್ನೆ ಮಾಡುವವರೇ ಆಗಿದ್ದಾರೆ.

ಒಂದು ಕಡೆ ಆಡಲಾಗದ ಸಂಕಟ, ಇನ್ನೊಂದು ಕಡೆ ಟಿವಿ ಸೇರಿದಂತೆ ಎಲ್ಲ ಕಡೆ ಎದುರಾಗುವ ಟೀಕೆಗಳ ಸುರಿಮಳೆಯನ್ನು ವಿರಾಟ್‌ ಕೊಹ್ಲಿ ಹೇಗೆ ಎದುರಿಸುತ್ತಾರೆ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಈ ಪ್ರಶ್ನೆಗೀಗ ಅವರೇ ಉತ್ತರ ಕೊಟ್ಟಿದ್ದಾರೆ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟ್ವಿಟರ್‌ ಹ್ಯಾಂಡಲ್‌ನಿಂದ ಒಂದು ಕುತೂಹಲಕಾರಿ, ತಮಾಷೆಯ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ನಾಗ್‌ ಎನ್ನುವವರು ವಿರಾಟ್‌ ಕೊಹ್ಲಿ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ಟೀಕೆಗಳನ್ನು ಎದುರಿಸುವುದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆ ವಿರಾಟ್‌ ಕೊಹ್ಲಿ, ʻನಾನು ಟೀವಿಯನ್ನು ಮ್ಯೂಟ್‌ ಮಾಡುತ್ತೇನೆʼ ಎಂದು ಅವರು ಲಘು ಧಾಟಿಯಲ್ಲಿ ಉತ್ತರಿಸಿದ್ದಾರೆ.

ಒಂದಿಷ್ಟು ಲಘು ಮತ್ತೊಂದಿಷ್ಟು ಗಂಭೀರ ಮಾತುಗಳನ್ನು ಒಳಗೊಂಡ ಈ ವಿಡಿಯೊದಲ್ಲಿ ವಿರಾಟ್‌ ಸ್ವಲ್ಪ ಭಾವುಕರಾಗಿಯೂ ಮಾತನಾಡಿದ್ದಾರೆ. ʻʻಅವರೆಂದೂ ನನ್ನ ಸ್ಥಾನದಲ್ಲಿ ನಿಲ್ಲಲಾಗದು. ನನಗೆ ಏನಾಗುತ್ತಿದೆ ಎಂದು ಅವರು ಅನುಭವಿಸಲೂ ಸಾಧ್ಯವಿಲ್ಲ. ನನ್ನ ಬದುಕನ್ನು ಅವರು ಜೀವಿಸಲಾರರು. ನಾನು ಬದುಕಿದ ಆ ಕ್ಷಣಗಳನ್ನು ಅವರೆಂದೂ ಜೀವಿಸಲಾರರುʼʼ ಎಂದು ವಿಪರೀತ ಟೀಕೆ ಮಾಡುವ ವಿಮರ್ಶಕರಿಗೆ ಉತ್ತರ ನೀಡಿದ್ದಾರೆ.

ʻನೀವು ವಿಪರೀತ ಸದ್ದನ್ನು ಹೇಗೆ ನಿವಾರಿಸಿಕೊಳ್ಳುತ್ತೀರಿ? ಒಂದೋ ನೀವು ಟಿವಿಯನ್ನು ಮ್ಯೂಟ್‌ ಮಾಡುತ್ತೀರಿ. ಇಲ್ಲವೇ ಜನರು ಹೇಳುವ ಮಾತುಗಳಿಗೆ ಕಿವಿಯನ್ನೇ ಕೊಡುವುದಿಲ್ಲ. ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ.. ಅಲ್ಲವೇ? ನಾನು ಎರಡನ್ನೂ ಪಾಲಿಸುತ್ತೇನೆʼʼ ಎಂದಿದ್ದಾರೆ ವಿರಾಟ್‌ ಕೊಹ್ಲಿ.

ವಿರಾಟ್‌ ಕೊಹ್ಲಿ ಕಳೆದ ನೂರು ಪಂದ್ಯಗಳಲ್ಲಿ ಒಂದೇ ಒಂದು ಶತಕ ಬಾರಿಸಿಲ್ಲ. ಐಪಿಎಲ್‌ನಲ್ಲಿ ಕಳೆದ 12 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 216 ರನ್‌ ಮಾತ್ರ. ಬಂದಿದ್ದು ಒಂದೇ ಒಂದು ಅರ್ಧ ಶತಕ. ಎರಡು ಬಾರಿ ಸತತ ಸೇರಿ ಮೂರು ಬಾರಿ ಮೊದಲ ಬಾಲಿಗೇ ಔಟ್‌: ಇದೆಲ್ಲ ವಿರಾಟ್‌ ಇತ್ತೀಚಿಗಿನ ಸಾಧನೆ. ವಿರಾಟ್‌ ಪ್ರತಿ ಬಾರಿ ಕಡಿಮೆ ರನ್‌ಗೆ ಔಟಾದಾಗಲೂ ವೀಕ್ಷಕ ವಿವರಣೆಗಾರರು, ʻವಿರಾಟ್‌ ಕೊಹ್ಲಿ ಅತಿಯಾಗಿ ಆಟ ಆಡಿದ್ದರಿಂದ ಸುಸ್ತಾಗಿದ್ದಾರೆ. ಅವರಿಗೆ ಬ್ರೇಕ್‌ ಬೇಕುʼ ಎನ್ನುತ್ತಾರೆ. ಕ್ರಿಕೆಟ್‌ ವೀಕ್ಷಕರಂತೂ ವಿರಾಟ್‌ ಕೊಹ್ಲಿ ಎಲ್ಲ ವಿಭಾಗಗಳ ನಾಯಕತ್ವ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾರೆ. ಸ್ವಲ್ಪ ಕಾಲ ಆಟದಿಂದ ದೂರ ಉಳಿದರೆ ಒಳಿತು ಎನ್ನುತ್ತಿದ್ದಾರೆ.

ಆದರೆ, ವಿರಾಟ್‌ ಕೊಹ್ಲಿ ಅಭಿಮಾನಿಗಳು ಮಾತ್ರ ತಮ್ಮ ನಾಯಕ ಯಾವುದೇ ಕ್ಷಣ ಎದ್ದು ಬರಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಈ ಬಾರಿ ಆರ್‌ಸಿಬಿಯನ್ನು ಗೆದ್ದೇ ಗೆಲ್ಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಡಿವಿಲಿಯರ್ಸ್‌ ಬಗ್ಗೆ ಪ್ರೀತಿ ಮಾತು
ಆರ್‌ಸಿಬಿ ತಂಡದಲ್ಲಿದ್ದು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ದಕ್ಷಿಣ ಆಫ್ರಿಕಾ ಮೂಲದ ಎ.ಬಿ. ಡಿವಿಲಿಯರ್ಸ್‌ ಬಗ್ಗೆ ವಿರಾಟ್‌ ಈ ವಿಡಿಯೊದಲ್ಲಿ ಪ್ರೀತಿಯಿಂದ ಮಾತನಾಡಿದ್ದಾರೆ. ʻʻನಾನು ಅವರನ್ನು ತುಂಬ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನಾವು ಆಗಾಗ ಮಾತನಾಡಿಕೊಳ್ಳುತ್ತೇವೆ. ಅವರು ನನಗೆ ಆಗಾಗ ಮೆಸೇಜ್‌ ಮಾಡುತ್ತಾ ಇರುತ್ತಾರೆ. ಅವರು ಆರ್‌ಸಿಬಿ ಪಂದ್ಯಗಳನ್ನು ಈಗಲೂ ನೋಡುತ್ತಿದ್ದಾರೆ. ಮುಂದಿನ ವರ್ಷ ಯಾವುದಾದರೂ ಒಂದು ರೂಪದಲ್ಲಿ ನಮ್ಮ ಜತೆಗೆ ಸೇರಿಕೊಳ್ಳಬಹುದುʼʼ ಎಂದಿದ್ದಾರೆ ವಿರಾಟ್‌.

Exit mobile version