ಕೊಲ್ಕತ್ತಾ: ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ(Kolkata Doctor Murder Case) ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಈಗಾಗಲೇ ಹಲವು ಕ್ರಿಕೆಟಿಗರು ಮತ್ತು ಸಿನಿಮಾ ನಟ-ನಟಿಯರು ಒತ್ತಾಯಿಸಿದ್ದಾರೆ. ಇದೀಗ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಕೂಡ ಈ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿರುವ ಚಹಲ್, ‘ಈ ಪ್ರಕರಣದ ಆರೋಪಿಯ ಕಾಲನ್ನು 90 ಡಿಗ್ರಿಗಳಲ್ಲಿ ಮುರಿಯಬೇಕು. ಖಾಸಗಿ ಭಾಗಗಳಿಗೆ ಗಾಯ ಮಾಡಿ. ಎಲ್ಲಾ ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸುವಂತೆ ಮಾಡಬೇಕು. ಬಳಿಕ ಗಲ್ಲಿಗೇರಿಸಿ’ ಎಂದು ಬರೆದುಕೊಂಡಿದ್ದರು. ಆಕ್ರೋಶಭರಿತ ಪೋಸ್ಟ್ನಿಂದ ಪ್ರತಿಭಟನಾಕಾರರು ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ಸಾಧ್ಯತೆ ಇದೆ ಎಂಬ ಭಯದಿಂದ ಚಹಲ್ ತಾವು ಪೋಸ್ಟ್ ಮಾಡಿದ ಒಂದು ಗಂಟೆ ಬಳಿಕ ಈ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೂ ಕೆಲ ನೆಟ್ಟಿಗರು ಈ ಪೋಸ್ಟ್ನ ಸ್ಕ್ರೀನ್ ಶಾಟ್ ತೆಗೆದಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಚಹಲ್ ಅವರ ಈ ಪೋಸ್ಟ್ಗೆ ಹಲವರು ಬೆಂಬಲ ಸೂಚಿಸಿದ್ದಾರೆ.
ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕೂಡ ವೈದ್ಯೆಯ ಅತ್ಯಾಚಾರ, ಕೊಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಬುಧವಾರ ಗಂಗೂಲಿ ಅವರ ಪತ್ನಿ ಡೊನ್ನಾ ಅವರ ನೃತ್ಯ ಶಾಲೆ ದೀಕ್ಷಾ ಮಂಜರಿಯಿಂದ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಇದರಲ್ಲಿ ಗಂಗೂಲಿ ಕೂಡ ಪಾಲ್ಗೊಂಡಿದ್ದರು.
ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ದೇಶದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಮತ್ತೊಂದು ಅತ್ಯಾಚಾರ ಪ್ರಕರಣಕ್ಕಾಗಿ ದೇಶ ಕಾಯಲು ಸಾಧ್ಯವಿಲ್ಲ” ಎಂದು ಕಟುವಾಗಿ ಹೇಳಿದ್ದರು. ಅಸ್ತಿತ್ವದಲ್ಲಿರುವ ಕಾಯ್ದೆಗಳು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸಾಂಸ್ಥಿಕ ಸುರಕ್ಷತಾ ಮಾನದಂಡಗಳನ್ನು ಖಾತರಿಪಡಿಸುವುದಿಲ್ಲ. ಪುರುಷಪ್ರಭುತ್ವದಿಂದಾಗಿ ಮಹಿಳಾ ವೈದ್ಯರೇ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ಸಿಜೆಐ ಚಂದ್ರಚೂಡ್ ಗಮನಿಸಿದ್ದರು.
ಪ್ರತಿಭಟಿಸುವ ವೈದ್ಯರ ಮೇಲೆ ನಿಮ್ಮ ಅಧಿಕಾರವನ್ನು ಪ್ರದರ್ಶಿಸಬೇಡಿ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದೆ. ಕೋರ್ಟ್ ವೈದ್ಯರಿಗೆ ಕೆಲಸವನ್ನು ಪುನರಾರಂಭಿಸಲು ಕೇಳಿದೆ. ವೈದ್ಯರ ಕಳವಳವನ್ನು ಅತ್ಯಂತ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಕಾರ್ಯಪಡೆಯು ತನ್ನ ಮಧ್ಯಂತರ ವರದಿಯನ್ನು ಮೂರು ವಾರಗಳಲ್ಲಿ ಮತ್ತು ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಲಿದೆ ಎಂದು ಹೇಳಿದೆ.
ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಸೇರಿದಂತೆ ಶಂಕಿತರನ್ನು ಸಿಬಿಐ ತನಿಖೆಗೊಳಪಡಿಸಿದೆ. ನಿನ್ನೆ ಮುಂಜಾನೆ ಪ್ರಕರಣದ ಹಲವಾರು ಶಂಕಿತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಿಂದ ಸರಣಿ ತನಿಖೆಗೆ ಒಳಗಾದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಆಗಸ್ಟ್ 22ರೊಳಗೆ ತನಿಖೆಯ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಏಜೆನ್ಸಿಯನ್ನು ಕೇಳಿದೆ.