Site icon Vistara News

KPL: ನಾಲ್ಕು ವರ್ಷಗಳ ಬಳಿಕ ಮತ್ತೆ ಆರಂಭಗೊಳ್ಳಲಿದೆ ಕರ್ನಾಟಕ ಪ್ರೀಮಿಯರ್​ ಲೀಗ್​

karnataka premier league logo

ಬೆಂಗಳೂರು: ಮ್ಯಾಚ್ ಫಿಕ್ಸಿಂಗ್ ಹಗರಣ ಮತ್ತು ಕೊರೊನಾ ಬಿಕ್ಕಟ್ಟಿನಿಂದ ಸ್ಥಗಿತವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್(Karnataka Premier League)​ ಪುನರಾರಂಭಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(Karnataka State Cricket Association) ಸಿದ್ಧತೆ ಆರಂಭಿಸಿದೆ. ಮುಂದಿನ ತಿಂಗಳು ಈ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ. 2019ರಲ್ಲಿ ಕೊನೆಯ ಬಾರಿಗೆ ಟೂರ್ನಿ ನಡೆದಿತ್ತು. ಬಳಿಕ ಟೂರ್ನಿ ನಡೆದಿರಲಿಲ್ಲ. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಆರಂಭಗೊಳ್ಳಲಿದೆ.

ಗ್ರಾಮಾಂತರ ಕ್ರಿಕೆಟ್‌ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸುವ ಈ ಟೂರ್ನಿಯಲ್ಲಿ ಮಿಂಚಿದ್ದ ಅನೇಕ ಕ್ರಿಕೆಟಿಗರು ಭಾರತ ತಂಡದ ಪರ ಆಡುವ ಅಕಾಶವನ್ನು ಪಡೆದಿದ್ದರು. ಹೀಗಾಗಿ ಇದು ಸ್ಥಳೀಯ ಕ್ರಿಕೆಟ್​ ಪ್ರತಿಭೆಗಳಿಗೆ ತಮ್ಮ ಪ್ರದರ್ಶನ ತೋರ್ಪಡಿಸಲು ಉತ್ತಮ ವೇದಿಕೆಯಾಗಿದೆ. ಸದ್ಯ 4 ವರ್ಷಗಳಿಂದ ಸ್ಥಗಿತವಾಗಿರುವ ಈ ಟೂರ್ನಿಯನ್ನು ಪುನರಾರಂಭಿಸುವ ಕುರಿತು ರಾಜ್ಯ ಸಂಸ್ಥೆಯಲ್ಲಿ ಚರ್ಚೆಗಳು ನಡೆಯುತ್ತಿವೆ.

ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್​ ಬಿನ್ನಿ(Roger Binny) ಅವರು ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಪಿಎಲ್​ಗೆ ಪರ್ಯಾಯವಾಗಿ ಮಹಾರಾಜ ಟ್ರೋಫಿ ಟಿ20 ಲೀಗ್ ಆಯೋಜಿಸಿತ್ತು. ಆದರೆ ಅದು ಫ್ರಾಂಚೈಸಿ ಲೀಗ್ ಆಗಿರಲಿಲ್ಲ. ಪ್ರಾಯೋಜಕತ್ವ ಮಾದರಿಯಲ್ಲಿ ನಡೆದಿತ್ತು. ಇದರಲ್ಲಿ ಆರು ತಂಡಗಳು ಪಾಲ್ಗೊಂಡಿದ್ದವು. ಆಟಗಾರರನ್ನು ಮತ್ತು ನೆರವು ಸಿಬ್ಬಂದಿಗಳನ್ನು ಕೆಎಸ್‌ಸಿಎ ನೇಮಿಸಿದ್ದ ಸಮಿತಿಯು ಆಯ್ಕೆ ಮಾಡಿತ್ತು. ಮೈಸೂರು ಮತ್ತು ಬೆಂಗಳೂರಿನಲ್ಲಿ ಪಂದ್ಯಗಳು ನಡೆದಿದ್ದವು. ಆದರೆ ಈ ಟೂರ್ನಿಗೆ ಸರಿಯಾದ ಬೆಂಬಲ ಸಿಗದೆ ವಿಫಲವಾಗಿತ್ತು. ವೀಕ್ಷಕರ ಸಂಖ್ಯೆಯೂ ಬೆರಳಣಿಕೆಯಷ್ಟೇ ದಾಖಲಾಗಿತ್ತು.

“2009ರಲ್ಲಿ ಆರಂಭಗೊಂಡ ಕೆಪಿಎಲ್​ ಟೂರ್ನಿಯನ್ನು ಮತ್ತೆ ಆರಂಭಿಸುವ ಚಿಂತನೆ ಆರಂಭವಾಗಿದೆ. ಈ ಕುರಿತು ಶೀಘ್ರದಲ್ಲಿಯೇ ಸಂಪೂರ್ಣ ಚರ್ಚೆ ನಡೆಸಿ ಯೋಜನೆ ಸಿದ್ಧಪಡಿಸುತ್ತೇವೆ. ಆಗಸ್ಟ್‌ನಲ್ಲಿಯೇ ಟೂರ್ನಿ ನಡೆಯುವುದು ಬಹುತೇಕ ಖಚಿತ” ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್(RAGHURAM BHAT A) ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ Raghuram Bhat | ಕೆಎಸ್​ಸಿಎ ಅಧ್ಯಕ್ಷರಾಗಿ ರಘುರಾಮ್ ಭಟ್ ಅವಿರೋಧ ಆಯ್ಕೆ

ಮ್ಯಾಚ್​ ಫಿಕ್ಸಿಂಗ್​ ಕಳಂಕ

ಇದೇ ಟೂರ್ನಿಯಲ್ಲಿ 2019ರಲ್ಲಿ ಮ್ಯಾಚ್‌ ಫಿಕ್ಸಿಂಗ್ ನಡೆದ ಆರೋಪ ಕೇಳಿಬಂದಿತ್ತು. ಟೂರ್ನಿಯಲ್ಲಿ ಆಡಿದ್ದ ರಾಜ್ಯದ ಕೆಲವು ಆಟಗಾರರು, ಕೋಚ್ ಮತ್ತು ಫ್ರ್ಯಾಂಚೈಸಿಯ ಮಾಲೀಕರೊಬ್ಬರನ್ನು ಈ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಘಟನೆ ದೇಶದಲ್ಲಿ ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು. ಇದರ ಬೆನ್ನಲೇ ಕೊರೊನಾ ಕೂಡ ದಾಳಿ ಮಾಡಿತ್ತು. ಹೀಗಾಗಿ ಟೂರ್ನಿ ಮತ್ತೆ ಆರಂಭಗೊಂಡಿರಲಿಲ್ಲ.

Exit mobile version