ರಾಜ್ಕೋಟ್: ಇಂಗ್ಲೆಂಡ್(India vs England 3rd Test) ವಿರುದ್ಧದ ಉಳಿದಿರುವ ಮೂರು ಟೆಸ್ಟ್ ಪಂದ್ಯಕ್ಕೆ ಇಂದು ಭಾರತ ತಂಡ ಪ್ರಕಟಗೊಂಡಿದೆ. ಆದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ಅವಕಾಶ ನೀಡಿದರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವ ವಿಕೆಟ್ ಕೀಪರ್ ಕಮ್ ಬ್ಯಾಟರ್ ಶ್ರೀಕರ್ ಭರತ್(KS Bharat)ಗೆ ಮತ್ತೆ ಅವಕಾಶ ನೀಡಿದ ಕುರಿತು ಟೀಮ್ ಇಂಡಿಯಾ ಅಭಿಮಾನಿಗಳು ಆಯ್ಕೆ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ಅಭಿಮಾನಿಗಳು, ಕಳಪೆ ಪ್ರದರ್ಶನ ತೋರುತ್ತಿರುವ ಆಟಗಾರರಿಗೆ ಪದೇಪದೆ ಅವಕಾಶ ನೀಡುತ್ತಿರುವ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕು. ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ತಂಡದಿಂದ ಕೈಬಿಡುವುದು ಸರಿಯಲ್ಲ. ಇದಲ್ಲದೆ ತಂಡಕ್ಕೆ ಆಯ್ಕೆ ಮಾಡಿ ಅವರನ್ನು ಬೆಂಚ್ ಕಾಯಿಸುವುದು ದೊಡ್ಡ ಅಪರಾಧ. ಮೂರನೇ ಪಂದ್ಯದಲ್ಲಿ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ಗೆ(Dhruv Jurel) ಅವಕಾಶ ನೀಡುವಂತೆ ಟೀಮ್ ಇಂಡಿಯಾ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ IND vs ENG: ಕೊನೆಗೂ ಭಾರತ ತಂಡ ಪ್ರಕಟ; ವಿರಾಟ್ ಕೊಹ್ಲಿ ಸರಣಿಯಿಂದಲೇ ಔಟ್
23 ವರ್ಷದ ಧೃವ್ ಜುರೆಲ್ ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡದ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ವಿಶ್ವ ಕ್ರಿಕೆಟ್‌ಗೆ ಪರಿಚಿತರಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಹೆಚ್ಚಾಗಿ ಆಡುತ್ತಿದ್ದ ಅವರು 13 ಪಂದ್ಯಗಳನ್ನು ಆಡಿ 152 ರನ್ ಬಾರಿಸಿದ್ದಾರೆ. ಜುರೆಲ್ ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.
2020ರಲ್ಲಿ ಭಾರತ ಪರ ಜುರೆಲ್ ಅಂಡರ್-19 ವಿಶ್ವಕಪ್ ಆಡಿದ್ದರು. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜುರೆಲ್, 89 ರನ್ ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಒಳಗೊಂಡಿದೆ. 2022ರಲ್ಲಿ ಉತ್ತರ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜುರೆಲ್ ಇದುವರೆಗೆ ಒಟ್ಟು 15 ಪಂದ್ಯಗಳಲ್ಲಿ 46.47ರ ಸರಾಸರಿಯಲ್ಲಿ 790 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಸಿಡಿಸಿದ್ದಾರೆ. ಜುರೆಲ್ ಕಳೆದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ-ಎ ತಂಡದ ಭಾಗವಾಗಿದ್ದರು. ಆದರೆ, ಆಡುವ ಅವಕಾಶ ಸಿಕ್ಕಿರಲಿಲ್ಲ. ಮೂರನೇ ಪಂದ್ಯದಲ್ಲಿ ಕಣಕ್ಕಿಳಿದರೆ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಂತಾಗುತ್ತದೆ.
ಆಡಿದ ಎಲ್ಲ ಟೆಸ್ಟ್ನಲ್ಲಿಯೂ ಭರತ್ ವಿಫಲ
ಭರತ್ ಭಾರತ ಪರ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 12 ಇನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದರೂ ಕನಿಷ್ಠ ಒಂದೇ ಒಂದು ಅರ್ಧಶತಕ ಕೂಡ ಇವರಿಂದ ಬಾರಿಸಲು ಸಾಧ್ಯವಾಗಿಲ್ಲ. 44 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ರಿಷಭ್ ಪಂತ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆಯಲ್ಲಿರುವ ಕಾರಣ ಅವರ ಬದಲಿಗೆ ಭರತ್ ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಮೂರನೇ ಪಂದ್ಯದಿಂದ ಅವರು ಆಡುವ ಬಳಗದಿಂದ ಡ್ರಾಪ್ ಔಟ್ ಆಗುವುದು ಬಹುತೇಕ ಖಚಿತ ಎನ್ನುವಂತೆ ತೋರುತ್ತಿದೆ.