Site icon Vistara News

Viral Video: ಶತಕ ಸಿಡಿಸಿ ಶ್ರೀರಾಮನಿಗೆ ಅರ್ಪಿಸಿದ ಕೆಎಸ್​ ಭರತ್​

KS Bharat’s viral Bhagwan Ram inspired

ಅಹಮದಾಬಾದ್​: ರಾಮಮಂದಿರದ (Ram Mandir) 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಸೋಮವಾರ (ಜನವರಿ 22) ಪ್ರಾಣಪ್ರತಿಷ್ಠೆ ನೆರವೇರಿಸಲಾಗುತ್ತದೆ. ಇದೀಗ ಭಾರತ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​ ಕೆಎಸ್​ ಭರತ್(ks bharat)​ ಅವರು ಶತಕ ಬಾರಿಸಿ ಈ ಶತಕವನ್ನು ಶ್ರೀರಾಮನಿಗೆ ಅರ್ಪಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ (India vs England Test Series) ನಡುವಣ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭರತ್ 116 ರನ್​ ಬಾರಿಸಿ ಮಿಂಚಿದ್ದಾರೆ. ತಮ್ಮ ಶತಕ ಪೂರ್ತಿಗೊಳ್ಳುತ್ತಿದ್ದಂತೆ ಬಿಲ್ಲು ಬಾಣ ಹೊಡೆಯುವ ಶೈಲಿಯನ್ನು ತೋರಿಸಿ ತಮ್ಮ ಶತಕವನ್ನು ಶ್ರೀರಾಮನಿಗೆ ಸಮರ್ಪಿಸಿದರು. ಜತೆಗೆ ತಮ್ಮ ತೋಳಿನಲ್ಲಿರುವ ರಾಮನ ಟ್ಯಾಟು ಕೂಡ ತೋರಿಸಿದ್ದಾರೆ. ಈ ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡಿತು.

ಮೊದಲ ಇನಿಂಗ್ಸ್​ನಲ್ಲಿ 15 ರನ್​ ಗಳಿಸಿದ್ದ ಭರತ್​ ದ್ವಿತೀಯ ಇನಿಂಗ್ಸ್​ನಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ 165 ಎಸೆತ ಎದುರಿಸಿ 15 ಬೌಂಡರಿಗಳ ನೆರವಿನಿಂದ ಅಜೇಯ 116 ರನ್​ ಬಾರಿಸಿದರು. ಇಂಗ್ಲೆಂಡ್​ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದ ಭಾಗವಾಗಿರುವ ಭರತ್​, ಸರಣಿ ಆರಂಭಕ್ಕೂ ಮುನ್ನವೇ ತೋರಿದ ಈ ಪ್ರದರ್ಶನ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಇಂಗ್ಲೆಂಡ್​ ಮತ್ತು ಭಾರತ ನಡುವಣ ಟೆಸ್ಟ್​ ಸರಣಿ ಜನವರಿ 25ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಶನಿವಾರ ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಎಲ್ಲ ಆಟಗಾರರು ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಆಕ್ರಮಣಕಾರಿ ಆಟದಿಂದ ಹೊಸ ಬಾಜ್‌ಬಾಲ್ ಕ್ರಿಕೆಟ್ ಆರಂಭಿಸಿರುವ ಇಂಗ್ಲೆಂಡ್ ಸದ್ಯ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತವೂ ಬಲಿಷ್ಠ ಬ್ಯಾಟಿಂಗ್​ ಪಡೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಭಾರತದ ಆಟಗಾರರು ಬ್ಯಾಟಿಂಗ್​ ಅಭ್ಯಾಸಕ್ಕೆ ಹೆಚ್ಚಿನ ಪ್ರಾಶಸ್ಯ ನೀಡಿದ್ದಾರೆ.

ಇದನ್ನೂ ಓದಿ Ram Mandir: ‘ಪ್ರಾಣ ಪ್ರತಿಷ್ಠಾ’ ಆಹ್ವಾನ ಪಡೆದ ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್

ಈಗಾಗಲೇ ಕೋಚ್​ ದ್ರಾವಿಡ್​ ಎಲ್ಲ ಆಟಗಾರರಿಗೆ ಖಡಕ್​ ಎಚ್ಚರಿಕೆಯನ್ನು ನೀಡಿದ್ದು, ಈ ಸರಣಿಯನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು, ತವರಿನ ಪಿಚ್​ ಎನ್ನುವ ಕಲ್ಪನೆಯನ್ನು ಬದಿಗಿಟ್ಟು ಕಠಿಣ ಅಭ್ಯಾಸ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.

ಭರತ್​ ಅವರು ಕೀಪಿಂಗ್​ ನಡೆಸಿದರೆ, ಅಯ್ಯರ್(Shreyas Iyer)​ ಅಥವಾ ರಾಹುಲ್​ ಮಧ್ಯೆ ಯಾರು ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ? ಯಾರನ್ನು ಆಯ್ಕೆ ಮಾಡುವುದು ಎನ್ನುವುದು ಈಗ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆ.ಎಲ್ ರಾಹುಲ್ ತವರಿನ ಟೆಸ್ಟ್‌ಗಳಲ್ಲಿ ವಿಕೆಟ್ ಕೀಪಿಂಗ್​ ಮಾಡಿದರೆ, ಶ್ರೇಯಸ್ ಅಯ್ಯರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಖಚಿತ. ಆದರೆ, ಭರತ್​ ಕೀಪಿಂಗ್​ ಮಾಡಿದರೆ ರಾಹುಲ್​ ಮತ್ತು ಅಯ್ಯರ್​ ನಡುವೆ ಪೈಪೋಟಿ ಏರ್ಪಡಲಿದೆ.

Exit mobile version