ನವದೆಹಲಿ: ಭಾರತ ಪುರುಷರ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ಕನ್ನಡಿಗ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಸಿ.ಎ.ಕುಟ್ಟಪ್ಪ(CA Kuttappa) ಅವರು ಮತ್ತೊಂದು ಅವಧಿಗೆ ನೇಮಕಗೊಂಡಿದ್ದಾರೆ. ಈ ವಿಚಾರವನ್ನು ಭಾರತ ಬಾಕ್ಸಿಂಗ್ ಫೆಡರೇಷನ್(Boxing Federation of India) ಖಚಿತಪಡಿಸಿದೆ.
ಭಾರತ ತಂಡದ ಹೈ ಪರ್ಫಾಮೆನ್ಸ್ ನಿರ್ದೇಶಕ ಬರ್ನಾರ್ಡ್ ಡಾನ್ ಅವರ ಸಲಹೆಯ ಮೇರೆಗೆ ಕುಟ್ಟಪ್ಪ ಅವರನ್ನು ಮತ್ತೊಂದು ಅವಧಿಗೆ ಕೋಚ್ ಆಗಿ ನೇಮಿಸಲಾಗಿದೆ. ಫೆಡರೇಷನ್‌ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕುಟ್ಟಪ್ಪ ಅವರು ಕೋಚಿಂಗ್ ತಂಡದಲ್ಲಿರಬೇಕು ಎಂಬುದು ಬರ್ನಾರ್ಡ್ ಬಯಸಿದ್ದರು ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಎಫ್‌ಐ(BFI) ತಿಳಿಸಿದೆ.
2018 ರಿಂದ 2021ರ ಅಕ್ಟೋಬರ್‌ವರೆಗೆ ಕುಟ್ಟಪ್ಪ ಅವರು ಪುರುಷರ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ನರೇಂದರ್ ರಾಣಾ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿದ್ದ ಬೆನ್ನಲ್ಲೇ ರಾಣಾ ಅವರು ಕೋಚಿಂಗ್ ತಂಡದಲ್ಲಿದ್ದ ಎಲ್ಲರನ್ನೂ ಬದಲಾಯಿಸಿ ಹೊಸ ತಂಡವನ್ನು ಕಟ್ಟಿದ್ದರು. ಇದರಿಂದ ಕುಟ್ಟಪ್ಪ ಮುಖ್ಯ ಕೋಚ್ ಹುದ್ದೆ ಕಳೆದುಕೊಂಡಿದ್ದರು. ಇದೀಗ ಮತ್ತೆ ಮುಖ್ಯ ಕೋಚ್ ಹುದ್ದೆ ಅಲಂಕರಿಸಿದ್ದಾರೆ.
ಇದನ್ನೂ ಓದಿ Khelo India: ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದ ನಟ ಮಾಧವನ್ ಪುತ್ರ ವೇದಾಂತ್
ಕುಟ್ಟಪ್ಪ ಮಾರ್ಗದರ್ಶನದಲ್ಲಿ ಭಾರತ ತಂಡ ಪುರುಷರ ವಿಶ್ವ ಚಾಂಪಿಯನ್‌ಷಿಪ್, ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧೆಮಾಡಲಿದೆ. ಜತೆಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ.