ಫ್ರಾನ್ಸ್: ಕೆಲ ದಿನಗಳ ಹಿಂದಷ್ಟೇ ಫ್ರಾನ್ಸ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ(Kylian Mbappe) ಅವರಿಗೆ ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal) ಪರ ಆಡಲು ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಕಿಲಿಯನ್ ಎಂಬಾಪೆ ಅವರು ಅಲ್ ಹಿಲಾಲ್ ಕ್ಲಬ್ನ ಈ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರವಷ್ಟೇ ಅಲ್ ಹಿಲಾಲ್ ಕ್ಲಬ್ 2,716 ಕೋ.ರೂ. ಮೊತ್ತ ನೀಡಿ ತನ್ನತ್ತ ಸೆಳೆಯಲು ಪ್ರಯತ್ನಿಸಿದೆ, ಇದಕ್ಕೆ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಕೂಡ ಅನುಮತಿ ನೀಡಿದೆ ಎಂದು ವರದಿಯಾಗಿತ್ತು. ಆದರೆ ಶುಕ್ರವಾರ ಬಂದ ಮಾಹಿತಿ ಪ್ರಕಾರ ಎಂಬಾಪೆ ಅವರು ಈ ಕ್ಲಬ್ ಪರ ಆಡಲು ನಿರಾಕರಿಸಿದ್ದಾರೆ ಎಂದು ಫ್ರಾನ್ಸ್‌ನ ಪ್ರತಿಷ್ಠಿತ ಪತ್ರಿಕೆಯೊಂದು ವರದಿ ಮಾಡಿದೆ. ಇದಲ್ಲದೆ ಒಪ್ಪಂದಕ್ಕೆ ಸಹಿ ಹಾಕಲು ಪ್ಯಾರಿಸ್‌ಗೆ ಆಗಮಿಸಿದ್ದ ಅಲ್-ಹಿಲಾಲ್ ಅಧಿಕಾರಿಗಳನ್ನು ಭೇಟಿಯಾಗಲು ಎಂಬಾಪೆ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ಕ್ಲಬ್(Paris Saint Germain) ಪರ ಆಡುತ್ತಿರುವ ಎಂಬಾಪೆ ಅವರ ಈ ಕ್ಲಬ್ ಜತೆಗಿನ ಒಪ್ಪಂದ ಮುಂದಿನ ಋತುವಿನ ಬಳಿಕ ಕೊನೆಗೊಳ್ಳಲಿದೆ. ಇದಾದ ಬಳಿಕ ಅವರು ಈ ಕ್ಲಬ್ ಪರ ತಮ್ಮ ಒಪ್ಪಂದವನ್ನು ಮುಂದುವರಿಸಲು ಆಸಕ್ತಿ ತೋರಿಲ್ಲ ಎನ್ನಲಾಗಿದೆ. ಹೀಗಾಗಿ ಅವರನ್ನು ಸೆಳೆಯಲು ಅನೇಕ ಕ್ಲಬ್ಗಳು ಮುಂದೆ ಬರುತ್ತಿವೆ. ಮೂಲಗಳ ಪ್ರಕಾರ ಎಂಬಾಪೆ ರಿಯಲ್ ಮ್ಯಾಡ್ರಿಡ್(Real Madrid) ತಂಡದ ಪರ ಆಡಲು ಆಸಕ್ತಿ ತೋರಿದ್ದು ಈ ಕ್ಲಬ್ ಸೇರುವುದು ಬಹುತೇಖ ಖಚಿತ ಎಂದು ವರದಿಯಾಗಿದೆ. ಆದರೆ ಇದು ಅಧಿಕೃತವಾಗಿ ಪ್ರಕಟಗೊಂಡಿಲ್ಲ.
ಇದನ್ನೂ ಓದಿ Kylian Mbappe | 24ನೇ ವಸಂತಕ್ಕೆ ಕಾಲಿಟ್ಟ ಕೈಲಿಯನ್ ಎಂಬಾಪೆ
ಲಿಯೋನೆಲ್ ಮೆಸ್ಸಿ(lionel messi) ಅವರು ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ತೊರೆದಾಗ ಅಲ್ ಹಿಲಾಲ್ ಕ್ಲಬ್ ಭಾರಿ ಮೊತ್ತ ನೀಡಿ ಮೆಸ್ಸಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಮೆಸ್ಸಿ ಅವರು ಸೌದಿ ಲೀಗ್‌ನಲ್ಲಿ ಆಡುವ ಬದಲು ಅಮೆರಿಕದ ಮೇಜರ್ ಲೀಗ್‌ನಲ್ಲಿ (ಎಂಎಲ್‌ಎಸ್) ಆಡುವ ಇಚ್ಚೆಯಿಂದ ಇಂಟರ್ ಮಯಾಮಿ ಕ್ಲಬ್ ಪರ ಒಪ್ಪಂದ ಮಾಡಿಕೊಂಡರು. ಇದೀಗ ಮತ್ತೆ ಸ್ಟಾರ್ ಆಟಗಾರನ ಜತೆ ಒಪ್ಪಂದ ಮಾಡಿಕೊಳ್ಳುವಲ್ಲಿ ಈ ಕ್ಲಬ್ ವಿಫಲವಾಗಿದೆ ಎಂದು ತಿಳಿದುಬಂದಿದೆ.