ದುಬೈ: ಫ್ರಾನ್ಸ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ(Kylian Mbappe) ಅವರು ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್(Saudi Arabian giants Al-Hilal) ಪರ ಆಡಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದ್ದು, ಅವರ ಜತೆ ಒಪ್ಪಂದ ಮಾಡಿಕೊಳ್ಳಲು ಹಿಲಾಲ್ ಕ್ಲಬ್ ದಾಖಲೆಯ 2,716 ಕೋ.ರೂ. ಮೊತ್ತ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್ಜಿ) ಕ್ಲಬ್(Paris Saint Germain) ಪರ ಆಡುತ್ತಿರುವ ಎಂಬಾಪೆ ಅವರ ಈ ಕ್ಲಬ್ ಜತೆಗಿನ ಒಪ್ಪಂದ ಮುಂದಿನ ಋತುವಿನ ಬಳಿಕ ಕೊನೆಗೊಳ್ಳಲಿದೆ. ಇದಾದ ಬಳಿಕ ಅವರು ಈ ಕ್ಲಬ್ ಪರ ತಮ್ಮ ಒಪ್ಪಂದವನ್ನು ಮುಂದುವರಿಸಲು ಆಸಕ್ತಿ ತೋರಿಲ್ಲ ಎನ್ನಲಾಗಿದೆ. ಇದೇ ತಂಡದ ಪರ ಆಡುತ್ತಿದ್ದ ಫಿಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಇದೇ ವರ್ಷ ಈ ತಂಡ ತೊರೆದಿದ್ದರು. ಇದೀಗ ಮತ್ತೊಬ್ಬ ಸ್ಟಾರ್ ಆಟಗಾರ ತಂಡದಿಂದ ಬೇರ್ಪಡಲು ಮುಂದಾಗಿದ್ದಾರೆ.
ಇದನ್ನೂ ಓದಿ Lionel Messi: ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಲಿಯೋನೆಲ್ ಮೆಸ್ಸಿ
ಸದ್ಯ ಮೂಲಗಳ ವರದಿ ಪ್ರಕಾರ ಎಂಬಾಪೆ ಅವರನ್ನು ಅಲ್ ಹಿಲಾಲ್ ಕ್ಲಬ್ ದೊಡ್ಡ ಮೊತ್ತ ನೀಡಿ ತನ್ನತ್ತ ಸೆಳೆಯಲು ಪ್ರಯತ್ನಿಸಿದೆ. ಈ ವಿಚಾರವನ್ನು ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ದೃಢಪಡಿಸಿದೆ. ಇದಲ್ಲದೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಂಬಾಪೆ ಅವರೊಂದಿಗೆ ನೇರವಾಗಿ ಮಾತನಾಡಲು ಅಲ್ ಹಿಲಾಲ್ ಕ್ಲಬ್ಗೆ ಅನುಮತಿಯನ್ನೂ ನೀಡಿದೆ. ಪಿಎಸ್ಜಿಯ ಈ ನಿರ್ಧಾರವನ್ನು ನೋಡುವಾಗ ತಂಡ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಂತೆ ತೋರುತ್ತಿದೆ.
ಮೆಸ್ಸಿಗೂ ಗಾಳ ಹಾಕಿದ್ದ ಅಲ್ ಹಿಲಾಲ್ ಕ್ಲಬ್
ಲಿಯೋನೆಲ್ ಮೆಸ್ಸಿ(lionel messi) ಅವರು ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ತೊರೆದಾಗ ಅಲ್ ಹಿಲಾಲ್ ಕ್ಲಬ್ ಭಾರಿ ಮೊತ್ತ ನೀಡಿ ಮೆಸ್ಸಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಮೆಸ್ಸಿ ಅವರು ಸೌದಿ ಲೀಗ್ನಲ್ಲಿ ಆಡುವ ಬದಲು ಅಮೆರಿಕದ ಮೇಜರ್ ಲೀಗ್ನಲ್ಲಿ (ಎಂಎಲ್ಎಸ್) ಆಡುವ ಇಚ್ಚೆಯಿಂದ ಇಂಟರ್ ಮಯಾಮಿ ಕ್ಲಬ್ ಪರ ಒಪ್ಪಂದ ಮಾಡಿಕೊಂಡರು. ಒಂದೊಮ್ಮೆ ಮೆಸ್ಸಿ ಸೌದಿ ಲೀಗ್ನಲ್ಲಿ ಆಡುವ ಮನಸ್ಸು ಮಾಡಿದ್ದರೆ ಈ ಕ್ಲಬ್ ಪರ ಆಡುವ ಸಾಧ್ಯತೆ ಇತ್ತು.