ಕೊಲಂಬೊ: ಶ್ರೀಲಂಕಾದ ಅನುಭವಿ ಆಟಗಾರ, 2014ರ ಐಸಿಸಿ ಟಿ20 ವಿಶ್ವ ಕಪ್ ಚಾಂಪಿಯನ್ ತಂಡದ ಸದಸ್ಯ ಲಹಿರು ತಿರಿಮನ್ನೆ(Lahiru Thirimanne) ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಸಮಯದಲ್ಲೇ ಅನುಭವಿ ಆಟಗಾರನ ನಿವೃತ್ತಿ ನಿರ್ಧಾರ ಲಂಕಾ ಕ್ರಿಕೆಟ್ ಮಂಡಳಿಗೆ ಆಘಾತ ತಂದಿದೆ.
ನಿವೃತ್ತಿ ವಿಚಾರವನ್ನು 33 ವರ್ಷದ ತಿರಿಮನ್ನೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಲಂಕಾ ತಂಡದ ನಾಯಕಲನೂ ಕೂಡ ಆಗಿದ್ದ ತಿರಿಮನ್ನೆ 2010 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾಪರ್ಣೆ ಮಾಡಿದ್ದರು. ಲಂಕಾ ಪರ 44 ಟೆಸ್ಟ್, 127 ಏಕದಿನ ಮತ್ತು 26 ಟಿ20 ಪಂದ್ಯಗಳನ್ನು ಆಡಿದ್ದಾರೆ.
”ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. 13 ವರ್ಷಗಳ ಈ ಕ್ರಿಕೆಟ್ ಪಯಣದಲ್ಲಿ ನನಗೆ ಸಹಕರಿಸಿದ ನನ್ನ ಕುಟುಂಬ, ಸಹ ಆಟಗಾರರು ಮತ್ತು ಕೋಚ್ಗಳಿಗೆ ಧನ್ಯವಾದಗಳು. ಇದು ಕಠಿನ ನಿರ್ಧಾರವಾಗಿತ್ತು, ನನ್ನ ಮೇಲೆ ಪ್ರಭಾವ ಬೀರಿದ ಅನೇಕ ಅನಿರೀಕ್ಷಿತ ಕಾರಣಗಳನ್ನು ನಾನು ಇಲ್ಲಿ ಉಲ್ಲೇಖಿಸಲಾರೆ” ಎಂದು ಹೇಳುವ ಮೂಲಕ ತಿರಿಮನ್ನೆ ತಮ್ಮ ನಿವೃತ್ತಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದಾರೆ.
“ಒಬ್ಬ ಕ್ರೀಡಾಪಟುವಾಗಿ ನಾನು ನನ್ನ ದೇಶಕ್ಕೆ ಅತ್ಯುತ್ತಮವಾದುದನ್ನು ನೀಡಿದ್ದೇನೆ. ನನ್ನ ಆಟವನ್ನು ಗೌರವಿಸುತ್ತೇನೆ. ನನ್ನ ಮಾತೃಭೂಮಿಗೆ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಮುಂದಿನ ದಿನಗಳನ್ನು ಹೆಚ್ಚಾಗಿ ಕುಟುಂಬ ಸದಸ್ಯರ ಜತೆ ಕಳೆಯಲು ಇಚ್ಚಿಸುತ್ತೇನೆ” ಎಂದು ತಿರಿಮನ್ನೆ ಹೇಳಿದರು.
ತಿರಿಮನ್ನೆ ಲಂಕಾ ಪರ ಟೆಸ್ಟ್ನಲ್ಲಿ 2,080 ರನ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ 3,194 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು ಏಳು ಶತಕ ಸಿಡಿಸಿರುವ ಅವರು 2022ರಲ್ಲಿ ಭಾರತದ ಎದುರು ಕೊನೆಯದಾಗಿ ಲಂಕಾ ಪರ ಟೆಸ್ಟ್ ಪಂದ್ಯವಾಡಿದ್ದರು. 4 ವರ್ಷಗಳ ಹಿಂದೆ ಶ್ರೀಲಂಕಾ ಪರ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.