Site icon Vistara News

Lakshya Sen | ಸುಳ್ಳು ಜನನ ಪ್ರಮಾಣ ವಂಚನೆ ಆರೋಪ; ಲಕ್ಷ್ಯ ಸೇನ್ ಹಾಗೂ ಕೋಚ್ ವಿರುದ್ಧ ಎಫ್‌ಐಆರ್ ದಾಖಲು!

lakshya sen

ಬೆಂಗಳೂರು: ಭಾರತದ ಸ್ಟಾರ್​ ಬ್ಯಾಡ್ಮಿಂಟನ್​​ ಆಟಗಾರ ಲಕ್ಷ್ಯ ಸೇನ್ ಹಾಗೂ ಕೋಚ್ ವಿಮಲ್‌ ಕುಮಾರ್ ವಿರುದ್ಧ ವಯಸ್ಸು ತಿದ್ದಿದ ಜನನ ಪ್ರಮಾಣ ಸೃಷ್ಟಿಸಿ ವಂಚಿಸಿದ ಆರೋಪದಲ್ಲಿ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ನಕಲಿ ಜನನ ಪ್ರಮಾಣ ಸೃಷ್ಟಿಸಿ ಸರ್ಕಾರ ಹಾಗೂ ಪ್ರತಿಭಾವಂತ ಆಟಗಾರರನ್ನು ವಂಚಿಸಿದ ಆರೋಪದಡಿ ಎಂ.ಜಿ. ನಾಗರಾಜ್ ಅವರು ವಂಚನೆ ಕೃತ್ಯದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿತ್ತು. ವಿಚಾರಣೆಯ ಭಾಗವಾಗಿ ಇದೀಗ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ತಂದೆ,ತಾಯಿ ಮತ್ತು ಸಹೋದರನೂ ಆರೋಪಿಗಳು!

ಈ ಪ್ರಕರಣದಲ್ಲಿ ಲಕ್ಷ್ಮ ಸೇನ್ ಮತ್ತು ಕೋಚ್‌ ವಿಮಲಕುಮಾರ್ ಜತೆ ಲಕ್ಷ್ಮ ಅವರ ತಂದೆ ಧೀರೇಂದ್ರ ಕುಮಾರ್ ಸೇನ್, ತಾಯಿ ನಿರ್ಮಲ್‌ ಸೇನ್ ಸಹೋದರ ಚಿರಾಗ್ ಸೇನ್‌ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಕೋಚ್ ಆಗಿರುವ ವಿಮಲ್‌ಕುಮಾರ್ ಜತೆ ಸಂಚು ರೂಪಿಸಿ ಧೀರೇಂದ್ರಕುಮಾರ್ ಹಾಗೂ ನಿರ್ಮಲ್ ಸೇನ್ ಅವರು ತಮ್ಮ ಇಬ್ಬರೂ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ಕೊಡಿಸಿದ್ದರು. ಮಕ್ಕಳ ವಯಸ್ಸು ತಿದ್ದುಪಡಿ ಮಾಡಿ ಜನನ ಪ್ರಮಾಣ ಪತ್ರ ಸೃಷ್ಟಿಸಿದ್ದರು ಎಂದು ದೂರಿನಲ್ಲಿದೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸರ್ಕಾರಕ್ಕೂ ಮೋಸ
ಲಕ್ಷ್ಯಸೇನ್ ತಮ್ಮ ನೈಜ ವಯಸ್ಸು ಮುಚ್ಚಿಟ್ಟು 2010ರಿಂದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗೆದ್ದಿದ್ದಾರೆ. ಜತೆಗೆ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದಿದ್ದಾರೆ. ಇದರಿಂದಾಗಿ ಅರ್ಹ ವಯಸ್ಸಿನ ಆಟಗಾರರಿಗೆ ಅನ್ಯಾಯವಾಗಿದೆ. ಆರೋಪಿಗಳ ಕೃತ್ಯದಿಂದಾಗಿ ಸರ್ಕಾರಕ್ಕೂ ವಂಚನೆಯಾಗಿದೆ. ಇದೀಗ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಾದಲ್ಲಿ ಅವರು ಗೆದ್ದ ಎಲ್ಲ ಪ್ರಶಸ್ತಿಗಳನ್ನು ಮುಟ್ಟುಗೋಲು ಹಾಕಬೇಕು ಮತ್ತು ಅವರಿಗೆ ಬ್ಯಾಡ್ಮಿಂಟನ್​ನಿಂದ ನಿಷೇಧ ವಿಧಿಸಬೇಕು ಎಂದು ಮೂಲಗಳು ತಿಳಿಸಿವೆ.

Exit mobile version