Site icon Vistara News

Praveen Kumar: ಚೊಚ್ಚಲ ಐಪಿಎಲ್​, ಚೆಂಡು ವಿರೂಪದ ಕರಾಳ ಸತ್ಯ ತೆರೆದಿಟ್ಟ ಭಾರತ ತಂಡದ ಮಾಜಿ ವೇಗಿ

Praveen Kumar

ಮೀರತ್​: ಭಾರತದ ಮಾಜಿ ವೇಗಿ, ಪ್ರವೀಣ್ ಕುಮಾರ್(Former Indian pacer, Praveen Kumar) ತಮ್ಮ ಆರಂಭಿಕ ಐಪಿಎಲ್​ ಒಪ್ಪಂದದ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ 2008 ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಐಪಿಎಲ್​ನಲ್ಲಿ ಇಷ್ಟವಿಲ್ಲದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡುವಂತೆ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ದಿ ಲಾಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರವೀಣ್​ ಕುಮಾರ್​ ಅವರು ಐಪಿಎಲ್​ನಲ್ಲಿ ತಾವು ಎದುರಿಸಿ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ಐಪಿಎಲ್ ಟೂರ್ನಿ ಆರಂಭವಾದಾಗ ನಾನು ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಲು ಉತ್ಸುಕನಾಗಿದ್ದೆ. ಏಕೆಂದರೆ ಡೆಲ್ಲಿ ನನ್ನ ಊರಾದ ಮೀರತ್ ನಿಂದ ಸ್ವಲ್ಪ ದೂರದಲ್ಲೇ ಇತ್ತು. ಆದರೆ, ನನ್ನನ್ನು ಒತ್ತಾಯ ಪೂರ್ವಕವಾಗಿ ಆರ್​ಸಿಬಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದರು. ನಾನು ಇದನ್ನು ಒಪ್ಪಿಕೊಳ್ಳದೇ ಹೋಗಿದ್ದರೆ ನನ್ನ ವೃತ್ತಿಜೀವನ ಕೊನೆಗೊಳಿಸುವಾಗಿ ಲಲಿತ್ ಮೋದಿ ತನಗೆ ಬೆದರಿಕೆ ಹಾಕಿದ್ದರು” ಎಂದು ಪ್ರವೀಣ್​ ಕುಮಾರ್​ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಆದ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

“ನನಗೆ ಆರ್​ಸಿಬಿ ಪರ ಆಡಲು ಇಷ್ಟವಿರಲಿಲ್ಲ. ನನ್ನ ಊರು ಮೀರತ್ ನಿಂದ ಬೆಂಗಳೂರು ತುಂಬಾ ದೂರ ಆಗುತ್ತಿತ್ತು. ನನಗೆ ಇಂಗ್ಲಿಷ್ ಪರಿಚಯವಿರಲಿಲ್ಲ. ಅಲ್ಲದೆ ಅಲ್ಲಿನ ಆಹಾರ ಕೂಡ ನನಗೆ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ನಾನು ಭಾರತ ತಂಡದ ಪರ ಆಡುವ ವೇಳೆ ಬೆಂಗಳೂರಿನಲ್ಲಿ ಹಲವು ಪಂದ್ಯ ಆಡಿದ್ದೆ. ಈ ವೇಳೆ ನನಗೆ ಅಲ್ಲಿನ ಆಹಾರ ಸೇವಿಸಿ ಆರೋಗ್ಯ ಸಮಸ್ಯೆಯಾಗಿತ್ತು. ನನಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಆರ್​ಸಿಬಿಗೆ ಸೇರುವಂತೆ ಮಾಡಿದ್ದು ಲಲಿತ್​ ಮೋದಿ” ಎಂದು ಪ್ರವೀಣ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ IPL Betting : ಐಪಿಎಲ್​ ಬೆಟ್ಟಿಂಗ್​ ಕೇಸ್​​ ತನಿಖೆ ಕೈಬಿಟ್ಟ ಸಿಬಿಐ!

ಪ್ರವೀಣ್​ ಕುಮಾರ್​ ಅವರು ಭಾರತದ ಪರ 6ಟೆಸ್ಟ್‌, 68 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನು ಆಡಿದ್ದಾರೆ. 119 ಐಪಿಎಲ್‌ ಪಂದ್ಯಗಳಲ್ಲೂ ಆಡಿದ್ದಾರೆ. 2018ರಲ್ಲಿ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ನಂತರ ಪ್ರವೀಣ್ ಅವರು ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಸದ್ಯ ಅವರು ನಿವೃತ್ತ ಕ್ರಿಕೆಟಿಗರು ಆಡುವ ಟಿ20 ಲೀಗ್‌ಗಳಲ್ಲಿ ತಮ್ಮ ಆಟ ಮುಂದುವರೆಸಿದ್ದಾರೆ.

ಬಾಲ್​ ಟ್ಯಾಂಪರಿಂಗ್​ ಎಲ್ಲ ತಂಡಗಳು ಮಾಡುತ್ತವೆ!


ಇದೇ ವೇಳೆ ಪ್ರವೀಣ್​ ಕುಮಾರ್​ ಅವರು ಚೆಂಡು ವಿರೂಪದ ಬಗ್ಗೆಯೂ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. ಚೆಂಡು ವಿರೂಪಗೊಳಿಸುವುದನ್ನು ಸಾಮಾನ್ಯವಾಗಿ ಎಲ್ಲಾ ದೇಶದ ಬೌಲರ್​ಗಳು ಮಾಡುತ್ತಾರೆ. ಅದರಲ್ಲೂ ಪಾಕಿಸ್ತಾನಿ ಬೌಲರ್​ಗಳು ಇರತ ತಂಡಗಳಿಂದ ಕೊಂಚ ಹೆಚ್ಚಾಗಿಯೇ ಇದನ್ನು ಮಾಡುತ್ತಾರೆ ಎಂದಿದ್ದಾರೆ. ರಿವರ್ಸ್ ಸ್ವಿಂಗ್ ಪಡೆಯುವ ಉದ್ದೇಶದಿಂದ ಚೆಂಡು ವಿರೂಪಗೊಳಿಸುತ್ತಾರೆ ಎಂದು ಅವರು ಹೇಳಿದರು. ಚೆಂಡನ್ನು ಶರ್ಟ್​ ಅಥವಾ ಪ್ಯಾಂಟ್​ಗೆ ಸರಿಯಾಗಿ ತಿಕ್ಕುವುದು ಕೂಡ ಒಂದು ರೀತಿಯ ಚೆಂಡು ವಿರೂಪ. ಆದರೆ, ಇದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಕಲೆ ಆಟಗಾರನಿಗೆ ತಿಳಿದಿರಬೇಕು ಎಂದು ಪ್ರವೀಣ್​ ಹೇಳಿದ್ದಾರೆ.

Exit mobile version