ಕೊಲಂಬೊ: ಅಬ್ಬಾ! ನಿಜಕ್ಕೂ ಇದೊಂದು ರೋಚಕ ಪಂದ್ಯ! ಕೊನೆಯ ಮೂರು ಓವರ್‌ನಲ್ಲಿ 59 ರನ್ ಹೊಡೆದು ಮ್ಯಾಚಿನ ದಿಕ್ಕನ್ನೇ ಬದಲಾಯಿಸಿ ಶ್ರೀಲಂಕಾ ಆಟಗಾರರು ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಆಗಲೇ ಆಸ್ಟ್ರೇಲಿಯಾ ಎರಡನ್ನು ಗೆದ್ದಿತ್ತು. ನಡೆಯುತ್ತಿದ್ದುದು ಮೂರನೇ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 177 ರನ್‌ನ ಟಾರ್ಗೆಟ್ ನೀಡಿತ್ತು. ಇದನ್ನು ಚೇಸ್ ಮಾಡಲು ಆರಂಭಿಸಿದ ಶ್ರೀಲಂಕಾ 17 ಓವರ್‌ಗೆ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಉಳಿದ 18 ಎಸೆತಗಳಲ್ಲಿ 59 ರನ್‌ಗಳ ಅವಶ್ಯಕತೆ. ಕೈಯಲ್ಲಿರುವುದು ಕೇವಲ ನಾಲ್ಕು ವಿಕೆಟ್. ಈ ಹಂತದಲ್ಲಿ ಇಷ್ಟು ಬಾಲ್, ಇಷ್ಟು ರನ್ ಅವಶ್ಯಕತೆ ಇರುವ ಯಾವ ಟಿ 20 ಪಂದ್ಯದಲ್ಲೂ ಚೇಸ್ ಮಾಡಿದ ತಂಡ ಗೆದ್ದ ಉದಾಹರಣೆಯೇ ಇಲ್ಲ.
ಹೀಗಾಗಿ, ಆಸ್ಟ್ರೇಲಿಯಾ ಆಟಗಾರರು ಕ್ಲೀನ್ ಸ್ವೀಪ್ ಉಮೇದಿನಲ್ಲಿ ನಿರಾಳವಾಗಿದ್ದರು. ಆಗ ಶುರುವಾಯಿತು ನೋಡಿ ಶ್ರೀಲಂಕಾ ನಾಯಕ ದಸುನ್ ಶನಕ ಮತ್ತು ಚಮಿಕ ಕರುಣರತ್ನೆಯ ಆರ್ಭಟ! ಶನಕ ಅಂತೂ ರುದ್ರತಾಂಡವವನ್ನೇ ನಡೆಸಿಬಿಟ್ಟರು.
18ನೇ ಓವರ್ ಬೌಲಿಂಗ್ ಮಾಡಿದ್ದು ಆಸ್ಟ್ರೇಲಿಯಾದ ಪ್ರಚಂಡ ವೇಗದ ಬೌಲರ್ ಜೋಶ್ ಹೇಜಲ್ ವುಡ್. ಮೊದಲ ಎಸೆತವನ್ನು ಎದುರಿಸಿದ ಕರುಣರತ್ನೆ ಒಂದು ರನ್ ತೆಗೆದು ಕ್ಯಾಪ್ಟನ್‌ಗೆ ಆಟ ಬಿಟ್ಟುಕೊಟ್ಟರು. ಆಗ ಎಲ್ಲಿತ್ತೋ ಜೋಶೆಲ್ಲ ಶನಕನ ಪಾಲಾಯಿತು. ಹೇಜಲ್ ವುಡ್ ಅವರ ಮುಂದಿನ ನಾಲ್ಕು ಎಸೆತಗಳಲ್ಲಿ ಎರಡು ಸಿಕ್ಸ್, ಎರಡು ಬೌಂಡರಿ ಸಹಿತ ಭರ್ತಿ 20 ರನ್ ಬಂತು. ಕೊನೆಯ ಬಾಲ್‌ಗೆ ಒಂದು ರನ್ ತೆಗೆದು ತಾನೇ ಬ್ಯಾಟಿಂಗ್ ಉಳಿಸಿಕೊಂಡರು ಶನಕ.
19ನೇ ಓವರ್ ಶುರು ಮಾಡುವಾಗ ಲಂಕಾದ ಬೇಡಿಕೆ 12 ಎಸೆತಕ್ಕೆ 37 ರನ್. ಶನಕ ಮತ್ತು ಕರುಣರತ್ನೆ ಈ ಓವರ್‌ನಲ್ಲಿ 18 ರನ್ ಕೊಳ್ಳೆ ಹೊಡೆದರು. ಕೊನೆಯ ಓವರ್‌ಗೆ ಉಳಿದದ್ದು 19 ರನ್ ಮಾತ್ರ!
19ನೇ ಓವರ್ ಬೌಲ್ ಮಾಡಿದ್ದು ಕೇನ್ ರಿಚರ್ಡ್ಸನ್. ಮೊದಲೆರಡು ಓವರ್‌ಗಳಲ್ಲಿ ಇವರಿಬ್ಬರ ಅಬ್ಬರ ನೋಡಿದ್ದ ಕೇನ್ ಎಷ್ಟು ಹೆದರಿದ್ದರೆಂದರೆ ಮೊದಲೆರಡು ಬಾಲ್‌ಗಳನ್ನು ವೈಡ್ ಆಗಿ ಎಸೆದು ಬಿಟ್ಟರು. ಬಳಿಕದ ನಿಜವಾದ ಓವರ್‌ನ ಎರಡು ಬಾಲ್‌ನಲ್ಲಿ ಎರಡೇ ರನ್ ಬಿಟ್ಟು ಕೊಟ್ಟಾಗ ಪಂದ್ಯ ಮತ್ತೆ ಆಸ್ಟ್ರೇಲಿಯಾ ಕಡೆಗೆ ವಾಲಿತು. ಆದರೆ ಮತ್ತೆ ಕ್ರೀಸ್‌ಗೆ ಬಂದ ಶನಕ ಬೆನ್ನು ಬೆನ್ನಿಗೆ ಎರಡು ಬೌಂಡರಿ, ಒಂದು ಸಿಕ್ಸರ್ ಬಾರಿ ಟಾರ್ಗೆಟ್ ಸಮಾಸಮ ಮಾಡಿಬಿಟ್ಟರು. ಕೊನೆಯ ಒಂದು ಬಾಲ್‌ನಲ್ಲಿ ಒಂದು ರನ್ ಸಾಕಿತ್ತು. ಆದರೆ, ಇಷ್ಟೆಲ್ಲ ಪೆಟ್ಟು ತಿಂದಿದ್ದ ಕೇನ್ ರಿಚರ್ಡ್ಸನ್ ಕೊನೆಯ ಬಾಲನ್ನೂ ವೈಡಾಗಿ ಎಸೆದು ಬಿಟ್ಟರು. ಅಲ್ಲಿಗೆ ಒಂದು ಬಾಲ್ ಇರುತ್ತಲೇ ಲಂಕಾ ಕಲ್ಪನಾತೀತ ಗೆಲುವನ್ನು ಪಡೆದು ಬೀಗಿತು.
ಲಂಕಾ ಕ್ಯಾಪ್ಟನ್ ಶನಕ ಅವರ ಅಬ್ಬರ ಹೇಗಿತ್ತೆಂದರೆ, 18ನೇ ಓವರ್ ಆರಂಭ ಆದಾಗ ಅವರ ಸ್ಕೋರ್ 12 ಎಸೆತಕ್ಕೆ ಕೇವಲ ಆರು ರನ್. ಮುಂದಿನ 13 ಎಸೆತದಲ್ಲಿ ಬಂದದ್ದು 48 ರನ್! ಅಚ್ಚರಿ ಎಂದರೆ 18ನೇ ಓವರ್‌ನಲ್ಲಿ 22 ರನ್ ಕೊಟ್ಟ ಹೇಜಲ್‌ವುಡ್ ಅದಕ್ಕಿಂತ ಹಿಂದಿನ ಮೂರು ಓವರ್‌ಗಳಲ್ಲಿ ಬಿಟ್ಟು ಕೊಟ್ಟದ್ದು ಕೇವಲ ಮೂರು ರನ್. ಅದರಲ್ಲೂ ಒಂದು ಓವರ್ ಮೇಡನ್. ಪಾಪ ಮೂರು ಓವರ್‌ನಲ್ಲಿ ಕೇವಲ ಮೂರು ರನ್ ಗೆ ಎರಡು ವಿಕೆಟ್ ಪಡೆದಿದ್ದ ಹೇಜಲ್‌ವುಡ್ ಕೊನೆಗೆ ನಾಲ್ಕು ಓವರ್ ಒಂದು ಮೇಡನ್ ಎರಡು ವಿಕೆಟ್ ಇಪ್ಪತ್ತೈದು ರನ್ ಎನ್ನುವಂತಾಯಿತು.!
ಅಂತಿಮವಾಗಿ ಈ ಆಟ ಒಂದು ವಿಶ್ವ ದಾಖಲೆ ಆಯಿತು. ಯಾಕೆಂದರೆ, ಯಾರು ಕೂಡಾ ಕೊನೆಯ ಮೂರು ಓವರ್‌ನಲ್ಲಿ ಇಷ್ಟೊಂದು ರನ್ ಬಡಿದು ಗೆಲುವನ್ನು ತಮ್ಮದಾಗಿಸಿಕೊಂಡ ಉದಾಹರಣೆಯೇ ಇಲ್ಲವಂತೆ. ಇನ್ನೊಂದು ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು!
ಇದನ್ನೂ ಓದಿ: T20 Ind v/s Sa | ಡೇವಿಡ್ ಮಿಲ್ಲರ್, ಡುಸೇನ್ ರೋಚಕ ಬ್ಯಾಟಿಂಗ್, ದೊಡ್ಡ ಟಾರ್ಗೆಟ್ ನೀಡಿದರೂ ಸೋತ ಭಾರತ