ದುಬೈ : ಏಷ್ಯಾ ಕಪ್ ೧೫ನೆ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಶ್ರೀಲಂಕಾ ತಂಡ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಲು ಬಳಸಿದ್ದು, ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ತಂತ್ರವನ್ನು. ಇದನ್ನು ಸ್ವತಃ ಲಂಕಾ ನಾಯಕ ದಸುನ್ ಶನಕ ಗೆಲುವಿನ ಬಳಿಕ ಹೇಳಿಕೊಂಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿಯೂ, ಎದುರಾಳಿ ತಂಡವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಧೋನಿಯ ರಣತಂತ್ರ ನೋಡಿ ಕಲಿತೆ ಎಂದು ಅವರು ಹೇಳಿಕೊಂಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ತಂಡವನ್ನು ೨೩ ರನ್‌ಗಳಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಮೂಲಕ ಕಳೆದ ಕೆಲವು ವರ್ಷಗಳಿಂದ ಪ್ರಮುಖ ಪ್ರಶಸ್ತಿಯೊಂದನ್ನು ಗೆದ್ದಿತು. ಈ ಟ್ರೋಫಿ ಸತತವಾಗಿ ವೈಫಲ್ಯ ಎದುರಿಸುತ್ತಿದ್ದ ಲಂಕಾ ತಂಡಕ್ಕೆ ಪ್ರೇರಣೆ ನೀಡಲಿದೆ.
ದುಬೈನ ಅಂತಾರಾಷ್ಟ್ರಿಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಭಾನುವಾರ ಪಂದ್ಯ ನಡೆದಿತ್ತು. ದುಬೈ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಸೋಲುತ್ತದೆ. ಏಷ್ಯಾ ಕಪ್‌ನಲ್ಲೂ ಬಹುತೇಕ ಪಂದ್ಯಗಳ ಫಲಿತಾಂಶ ಅದೇ ರೀತಿ ಮೂಡಿ ಬಂದಿವೆ. ಆದರೆ, ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಶ್ರೀಲಂಕಾ ತಂಡ ಗೆಲುವು ಸಾಧಿಸಿತ್ತು. ಅದಕ್ಕೆ ಧೋನಿಯ ತಂತ್ರವೇ ಕಾರಣ ಎಂದು ಹೇಳಿದ್ದಾರೆ ದಸುನ್.
೨೦೨೧ರ ಐಪಿಎಲ್ ಯುಎಇನಲ್ಲಿ ನಡೆದಿತ್ತು. ಫೈನಲ್ ಪಂದ್ಯ ದುಬೈನಲ್ಲಿ ಆಯೋಜನೆಗೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫಾಫ್ ಡು ಪ್ಲೆಸಿಸ್ ಅವರ ೮೬ ರನ್‌ಗಳ ನೆರವಿನಿಂದ ೨೦ ಓವರ್‌ಗಳಲ್ಲಿ ೧೯೩ ರನ್ ಬಾರಿಸಿತ್ತು. ಚೇಸ್ ಮಾಡಿದ ಕೆಕೆಆರ್ ತಂಡ ೧೬೫ ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಶಾರ್ದುಲ್ ಠಾಕೂರ್ ಮೂರು ವಿಕೆಟ್ ಕಬಳಿಸಿದ್ದರು. ಈ ವೇಳೆ ಸಿಎಸ್‌ಕೆ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಹಾಗೂ ವೇಗದ ಬೌಲಿಂಗ್ ಮೂಲಕ ಒತ್ತಡ ಹೇರಿ ೨೭ ರನ್‌ಗಳಿಂದ ಜಯ ಸಾಧಿಸಿ ಟ್ರೋಫಿ ಗೆದ್ದಿದ್ದರು. ಅದೇ ತಂತ್ರವನ್ನು ಈಗ ಬಳಸಿದೆ ಎಂದು ದಸುನ್ ಶನಕ ಹೇಳಿದ್ದಾರೆ.
೧೭೦ ರನ್‌ಗಳನ್ನು ಪೇರಿಸಿದ ತಕ್ಷಣ ಗೆಲ್ಲುವ ವಿಶ್ವಾಸ ಮೂಡಿತ್ತು. ೧೬೦ ರನ್ ಚೇಸ್ ಮಾಡಬಹುದಾದ ರನ್. ನಾವು ಅದಕ್ಕಿಂತ ೧೦ ರನ್ ಹೆಚ್ಚು ಗಳಿಸಿದ್ದೆವು. ಹೀಗಾಗಿ ಅದಕ್ಕೆ ತಕ್ಕ ಹಾಗೆ ಬೌಲಿಂಗ್ ಮಾಡಿ ಗೆಲುವು ಸಾಧಿಸಿದೆವು ಎಂದು ದಸುನ್ ಶನಕ ಹೇಳಿದ್ದಾರೆ.
ಇದನ್ನೂ ಓದಿ | Asia Cup | ಟ್ರೋಫಿ ಗೆಲುವಿನ ಶ್ರೇಯಸ್ಸನ್ನು ಸಂಕಷ್ಟದಲ್ಲಿರುವ ದೇಶದ ಜನತೆಗೆ ಅರ್ಪಿಸಿದ ಶನಕ