ಭೋಪಾಲ್: ಐದನೇ ಅವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ಗೆ (Khelo India Youth Games) ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ (ಜನವರಿ 30ರಂದು) ಚಾಲನೆ ಕೊಟ್ಟರು. ಇಲ್ಲಿನ ತಾತ್ಯಾ ಟೋಪೆ ಸ್ಟೇಡಿಯಮ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಮಾಯಿಸಿದ್ದ ಸಾವಿರಾರು ಕ್ರೀಡಾಸಕ್ತರ ಸಮ್ಮುಖದಲ್ಲಿ ರಾಷ್ಟ್ರಮಟ್ಟದ ಬೃಹತ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು . 27 ರಾಜ್ಯಗಳ 6000 ಅಥ್ಲೀಟ್ಗಳು ಪಾಲ್ಗೊಳ್ಳಲಿರುವ ಈ ಕ್ರೀಡಾಕೂಟ ಫೆಬ್ರವರಿ 9ರವರೆಗೆ ನಡೆಯಲಿದೆ.
ಮಧ್ಯಪ್ರದೇಶದಲ್ಲಿ ಈ ಕ್ರೀಡಾಕೂಟ ಆಯೋಜನೆಗೊಳ್ಳುತ್ತಿರುವುದು ಐತಿಹಾಸಿಕ ಸಂದರ್ಭವಾಗಿದೆ ಎಂದು ಹೇಳಿದ ಸಿಎಂ ಚೌಹಾಣ್ ಅವರು, ವಿಶ್ವ ಕಪ್ ಗೆದ್ದ 19ರ ವಯೋಮಿತಿಯ ಮಹಿಳೆಯರ ತಂಡದ ಸಾಧನೆಯನ್ನು ಕೊಂಡಾಡಿದರು.
13 ದಿನಗಳ ಕಾಲ ನಡೆಯುವ ಕ್ರೀಡಾಕೂಟವು ಏಷ್ಯಾಡ್, ಕಾಮನ್‌ವೆಲ್ತ್ ಮತ್ತು ಒಲಿಂಪಿಕ್ ಕ್ರೀಡಾಕೂಟಗಳಂತಹ ಭವಿಷ್ಯದ ಅಂತಾರರಾಷ್ಟ್ರೀಯ ಸ್ಪರ್ಧೆಗಳಿಗೆ ಆಟಗಾರರನ್ನು ಸಜ್ಜುಗೊಳಿಸಲಿದೆ. ಕಳೆದ ಆವೃತ್ತಿಯ KIYG ನಲ್ಲಿ ಮಧ್ಯಪ್ರದೇಶವು 38 ಪದಕಗಳನ್ನು ಗೆದ್ದಿದೆ ಎಂದು ಶಿವರಾಜ್ ಚೌಹಾಣ್ ಅವರು ಹೇಳಿದರು.
ಅನುರಾಗ್ ಠಾಕೂರ್ ಭರವಸೆ
ಅದಕ್ಕಿಂತ ಮೊದಲು ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಖೇಲೋ ಇಂಡಿಯಾ ಯೋಜನೆಗಾಗಿ ಮುಂದಿನ ಐದು ವರ್ಷಗಳಿಗೆ 3,200 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದರು.
ಮಧ್ಯಪ್ರದೇಶ ಸರಕಾರ ಖೇಲೋ ಇಂಡಿಯಾ ಯೂತ್ ಗೇಮ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸಲಿದೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ನ್ಯಾಷನಲ್ ಗೇಮ್ಸ್ ಹಾಗೂ ಇನ್ನಿತರ ಪ್ರಮುಖ ಕ್ರೀಡಾಕೂಟಗಳಿಗೆ ಆತಿಥ್ಯ ದೊರೆಯಲಿದೆ ಎಂದು ಹೇಳಿದರು.
ಮಧ್ಯಪ್ರದೇಶದ ಕ್ರೀಡಾ ಸಚಿವ ಯಶೋಧರ ರಾಜೇ ಸಿಂಧ್ಯಾ ಸೇರಿದಂತೆ ಹಲವು ಗಣ್ಯರು ಕ್ರೀಡಾಕೂಟ ಉದ್ಘಾಟನೆ ವೇಳೆ ಹಾಜರಿದ್ದರು.
ಇದನ್ನೂ ಓದಿ : 2028 Olympics Cricket: 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ?
ಹೊಸ ಕ್ರೀಡೆಗಳ ಸೇರ್ಪಡೆ
ಈ ಬಾರಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಸ್ಪರ್ಧೆಯ ಪಟ್ಟಿಗೆ ಕಯಾಕಿಂಗ್, ಕೆನೊಯಿಂಗ್, ಕೆನೊ ಸ್ಲಾಲೋಮ್, ಫೇನ್ಸಿಂಗ್ ಸೇರಿಸಲಾಗಿದೆ. ಭೋಪಾಲ್, ಇಂದೋರ್, ಉಜ್ಜೈನಿ, ಗ್ವಾಲಿಯರ್, ಜಬಲ್ಪುರ್, ಮಂಡಲ್, ಬಾಲ್ಘಾಟ್, ಮಹೇಶ್ವರ್ ಸೇರಿ ಎಂಟು ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್ ಸ್ಪರ್ಧೆಗಳು ದೆಹಲಿಯಲ್ಲಿ ನಡೆಯಲಿವೆ.
ಒಟ್ಟು 303 ಅಂತಾರಾಷ್ಟ್ರೀಯ ಅಧಿಕಾರಿಗಳು, 1089 ರಾಷ್ಟ್ರೀಯ ಅಧಿಕಾರಿಗಳು ಕ್ರೀಡಾಕೂಟವನ್ನು ಆಯೋಜಿಸಿಕೊಡಲಿದ್ದಾರೆ. ಅದೇ ರೀತಿ 2000 ಸ್ವಯಂ ಸೇವಕರು ಕೂಡ ಕಾರ್ಯನಿರ್ವಹಿಸುತ್ತಾರೆ.