ನವ ದೆಹಲಿ : ಇತ್ತೀಚೆಗೆ ಮುಕ್ತಾಯಗೊಂಡ ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಅಚ್ಚರಿಯ ಬಂಗಾರದ ಪದಕವೊಂದು ಲಭಿಸಿತ್ತು. ಅದು ಮಹಿಳೆಯರ ಲಾನ್ ಬೌಲ್ಸ್ ತಂಡದ ಸದಸ್ಯೆಯರಾದ ಪಿಂಕಿ, ನಯನ್ಮೋನಿ ಸೈಕಿಯಾ, ಲೌವ್ಲಿ ಚೌಬೆ ಹಾಗೂ ರೂಪಾರಾಣಿ ಟಿರ್ಕೆ ಮೂಲಕ. ಅವರ ಸಾಧನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರನೇಕರು ಹೊಗಳಿದ್ದಾರೆ.
ಈ ನಾಲ್ವರು ಸಾಧಕರಿಯರ ಮೂಲಕ ಲಾನ್ ಬೌಲ್ಸ್ ಎಂಬ ಕ್ರೀಡೆ ಭಾರತದ ಬಹುತೇಕರಿಗೆ ಪರಿಚಯವಾಗಿತ್ತು. ಇವೆಲ್ಲವೂ ಸಾಧನೆಯ ವಿವರಗಳಾದರೆ, ಈ ನಾಲ್ವರು ಮಹಿಳೆಯರು ಪದಕ ಗೆಲ್ಲುವ ಮೊದಲು ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದರು ಎಂಬುದು ಇದೀಗ ಬಯಲಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಾವೆದುರಿಸಿದ ಅವಮಾನಗಳನ್ನು ವಿವರಿಸಿ, ಕಣ್ಣೀರು ಹಾಕಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಸಾಧಕಿಯರು, ನಮ್ಮ ಮೇಲೆ ಸಾಕಷ್ಟು ಒತ್ತಡಗಳು ಇದ್ದವು. ಈ ಕ್ರೀಡೆಗಾಗಿ ತೆರಳುವಾಗ ಅನಗತ್ಯ ಮಾತುಗಳನ್ನು ಕೇಳಬೇಕಾಯಿತು. ಒಂದು ವೇಳೆ ಪದಕ ರಹಿತವಾಗಿ ಮರಳಿದ್ದರೆ ಮತ್ತೆಂದೂ ಲಾನ್ ಬೌಲ್ಸ್ ತಂಡವನ್ನು ಪ್ರತಿನಿಧಿಸಲು ಅವಕಾಶ ಲಭಿಸುತ್ತಿರಲಿಲ್ಲ,” ಎಂದು ಹೇಳಿ ಕಣ್ಣೀರು ಸುರಿಸಿದರು.
ಲವ್ಲಿ ಚೌಬೆ ಮಾತನಾಡಿ ”ನಮ್ಮ ಆಯ್ಕೆಯ ಬಗ್ಗೆಯೇ ಜನಕ್ಕೊಂದರಂತೆ ಮಾತನಾಡಿದರು. ನಮ್ಮ ಮುಖ ನೋಡಿ ತಂಡದಲ್ಲಿ ಅವಕಾಶ ನೀಡಲಾಗಿದೆ ಎಂದು ಕೆಲವರು ಹೇಳಿದರು. ಮುಖ ನೋಡಿ ಯಾರಾದರೂ ಅವಕಾಶ ಕೊಡುತ್ತಾರೆಯೇ, ಪದಕ ನೀಡುತ್ತಾರೆಯೇ,” ಎಂದು ಅವರು ಪ್ರಶ್ನಿಸಿದರಲ್ಲದೆ, ಸಂದರ್ಶನದಲ್ಲಿ ಜೋರಾಗಿ ಅತ್ತರು.
ಇದನ್ನೂ ಓದಿ | CWG- 2022 | ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?