Site icon Vistara News

Team India : ಐರ್ಲೆಂಡ್​ ಪ್ರವಾಸಕ್ಕೆ ದ್ರಾವಿಡ್​ಗೆ ರೆಸ್ಟ್​; ಭಾರತ ತಂಡಕ್ಕೆ ಬೇರೆ ಕೋಚ್​

VVS Laxman

ನವ ದೆಹಲಿ: ಐರ್ಲೆಂಡ್​ ಪ್ರವಾಸದ ವೇಳೆ ಭಾರತ ತಂಡದ (Team India) ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಅಧ್ಯಕ್ಷರಾದ ವಿವಿಎಸ್ ಲಕ್ಷ್ಮಣ್ ಐರ್ಲೆಂಡ್ ಪ್ರವಾಸ ಹೋಗಲಿರುವ ತಂಡದ ನೇತೃತ್ವ ವಹಿಸಲಿದ್ದಾರೆ. ದ್ರಾವಿಡ್ ಮತ್ತು ಟೀಮ್​ ಇಂಡಿಯಾ ಪ್ರಸ್ತುತ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿದೆ. ಈ ಹಿಂದೆಯೂ ದ್ರಾವಿಡ್ ಬದಲಿಗೆ ಐರ್ಲೆಂಡ್​ ಪ್ರವಾಸದ ವೇಳೆ ಲಕ್ಷ್ಮಣ್​ ಭಾರತ ತಂಡದ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದರು.

ಕ್ರಿಕ್​ಬಜ್​ ಪ್ರಕಾರ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಇತರ ಸಿಬ್ಬಂದಿ ವೆಸ್ಟ್ ಇಂಡೀಸ್ ವಿರುದ್ಧದ ಪ್ರಸ್ತುತ ಸರಣಿಯ ನಂತರ ವಿರಾಮ ತೆಗೆದುಕೊಳ್ಳಲಿದ್ದಾರೆ. ಅವರೆಲ್ಲರ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಮತ್ತು ಅವರ ಎಸಿಎ ಸಿಬ್ಬಂದಿ ಐರ್ಲೆಂಡ್​ನಲ್ಲಿ ಭಾರತ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸಿತಾಂಶು ಕೋಟಕ್ ಮತ್ತು ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್) ಮತ್ತು ಟ್ರಾಯ್ ಕೂಲಿ ಮತ್ತು ಸಾಯಿರಾಜ್ ಬಹುತುಲೆ (ಬೌಲಿಂಗ್) ಈ ಪ್ರವಾಸಕ್ಕೆ ಸ್ಪರ್ಧೆಯಲ್ಲಿದ್ದಾರೆ.

ಆಗಸ್ಟ್ 31ರಿಂದ ಪ್ರಾರಂಭವಾಗುವ ಏಷ್ಯಾ ಕಪ್​ಗೆ ಮುಂಚಿತವಾಗಿ ಕೋಚಿಂಗ್​ ಸಿಬ್ಬಂದಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಅವರಿಗೆ ಸಮಯ ನೀಡುವುದು ಮತ್ತು ನವೆಂಬರ್ 19ರಂದು ವಿಶ್ವ ಕಪ್​ ಬಳಿಕ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಈ ಅವಧಿಯಲ್ಲಿ ಯೋಜನೆಗಳು ಸಿದ್ದತೆಗೊಳ್ಳಲಿವೆ.

ಇದನ್ನೂ ಓದಿ : Jasprit Bumrah Fitness: ಏಷ್ಯಾಕಪ್​ಗೂ ಮುನ್ನವೇ ಭಾರತ ತಂಡ ಸೇರಲಿದ್ದಾರೆ ಜಸ್​ಪ್ರೀತ್ ಬುಮ್ರಾ

ಲಕ್ಷ್ಮಣ್ ಈ ಹಿಂದೆಯೂ ದ್ರಾವಿಡ್ ಬದಲಿ ಈ ಪಾತ್ರವನ್ನು ವಹಿಸಿಕೊಂಡಿದ್ದರು. ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ಹಿಂದಿನ ಐರ್ಲೆಂಡ್ ಪ್ರವಾಸದಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಿದಾಗ ಎನ್​ಸಿಎ ಮುಖ್ಯಸ್ಥ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದರು . 2022ರ ಏಷ್ಯಾಕಪ್​ನಲ್ಲಿ ದ್ರಾವಿಡ್ ಕೋವಿಡ್-19 ಸೋಂಕಿಗೆ ಒಳಗಾದಾಗಲೂ ಅವರು ಕೋಚಿಂಗ್ ಜವಾಬ್ದಾರಿ ನಿರ್ಹವಣೆ ಮಾಡಿದ್ದರು.

ಏಷ್ಯಾ ಕಪ್​ನಲ್ಲಿ ಭಾರತ- ಪಾಕ್​ ಮೂರು ಪಂದ್ಯಗಳು

ಏಷ್ಯಾ ಕಪ್ 2023ರಲ್ಲಿ (Asia Cup 2023) ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳ ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು ವಿವಿಧ ವರದಿಗಳು ಹೇಳಿವೆ. ಮುಂಬರುವ ಏಷ್ಯಾ ಕಪ್ ನಲ್ಲಿ ಉಭಯ ದೇಶಗಳು ಪರಸ್ಪರ ಎರಡು ಬಾರಿ ಆಡುವ ನಿರೀಕ್ಷೆಯಿದೆ. ಉಭಯ ತಂಡಗಳ ನಡುವಿನ ಮೊದಲ ಗುಂಪು ಹಂತದ ಮುಖಾಮುಖಿ ಸೆಪ್ಟೆಂಬರ್ 2ರಂದು ನಡೆಯಲಿದ್ದು, ಎರಡನೇ ಸುತ್ತಿನ ಎರಡನೇ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ ಎಂದು ಹೇಳಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪಂದ್ಯಗಳು ಶ್ರೀಲಂಕಾದ ಡಂಬುಲಾ ಅಥವಾ ಕ್ಯಾಂಡಿಯಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಏಷ್ಯಾಕಪ್ ಫೈನಲ್​ಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೋಗುವ ಸಾಧ್ಯತೆಗಳು ಇರುವುದರಿಂದ ಮೂರನೇ ಬಾರಿಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗುವ ಸಾಧ್ಯತೆಗಳಿವೆ. ಆಗಸ್ಟ್ 30 ಅಥವಾ 31ರಂದು ಮುಲ್ತಾನ್ ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳ ವಿರುದ್ಧ ಸೆಣಸಲಿದೆ. ಅದೇ ದಿನ ಟೂರ್ನಿಯ ಉದ್ಘಾಟನಾ ಸಮಾರಂಭವೂ ನಡೆಯಲಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಪಂದ್ಯಗಳಿಗೆ ಲಾಹೋರ್ ಕೂಡ ಆತಿಥ್ಯ ವಹಿಸಲಿದೆ.

Exit mobile version