ಬಫಲೋ( ಜಿಂಬಾಬ್ವೆ): ಜಿಂಬಾಬ್ವೆಯ ಮಾಜಿ ಖ್ಯಾತ ಕ್ರಿಕೆಟಿಗ ಗೈ ವಿಟ್ಟಲ್(Guy Whittall) ಅವರು ಚಿರತೆ(Leopard) ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ಜಿಂಬಾಬ್ವೆಯ ಬಫಲೋ ರೇಂಜ್‌ನಿಂದ ವಿಮಾನದ ಮೂಲಕ ತುರ್ತು ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿಟ್ಟಲ್ ಅವರ ಫೋಟೋಗಳನ್ನು ಅವರ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಟ್ಟಲ್ ಅವರು ಬ್ಯಾಂಡೇಜ್ ಮತ್ತು ರಕ್ತಸಿಕ್ತ ಅಂಗಿಯನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಸದ್ಯ ಅವರು ಮಿಲ್ಟನ್ ಪಾರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಟ್ಟಲ್ ಅವರು ಕಾಡುಪ್ರಾಣಿಯಿಂದ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲಲ್ಲ. 2013 ರಲ್ಲಿ, 8 ಅಡಿ ಉದ್ದದ ಮೊಸಳೆ ದಾಳಿಯಿಂದಲೂ ಪಾರಾಗಿದ್ದರು. ಈ ಮೊಸಳೆ ವಿಟ್ಟಲ್ ಅವರ ಹಾಸಿಗೆಯ ಕೆಳಗೆ ಅವಿತಿತ್ತು. 150 ಕೆ.ಜಿ ತೂಕದ ಮೊಸಳೆ ಜಿಂಬಾಬ್ವೆಯ ಹುಮಾನಿ ಲಾಡ್ಜ್‌ಗೆ ನುಸುಳಿತು ಮತ್ತು ಇಡೀ ರಾತ್ರಿ ಸದ್ದಿಲ್ಲದೆ ಮಲಗಿತು. ಮರುದಿನ ವಿಟ್ಟಲ್ ಬೆಳಗ್ಗೆ ಅಡುಗೆಮನೆಯಲ್ಲಿ ಉಪಾಹಾರ ಸೇವಿಸುತ್ತಿದ್ದ ವೇಳೆ ಮನೆಕೆಲಸದವಳ ಭಯಭೀತ ಕಿರುಚಾಟ ಕೇಳಿದಾಗ ಮೊಸಳೆ ಪತ್ತೆಯಾಗಿತ್ತು.
ಇದನ್ನೂ ಓದಿ IPL 2024: ಧೋನಿ, ಚೆನ್ನೈ ಪಂದ್ಯ ನೋಡಲು ದೆಹಲಿ ವರೆಗೂ ನಡೆದುಕೊಂಡು ಹೋಗುವೆ ಎಂದ ಶತಾಯುಷಿ ಅಭಿಮಾನಿ; ವಿಡಿಯೊ ವೈರಲ್
51 ವರ್ಷದ ವಿಟ್ಟಲ್ ಜಿಂಬಾಬ್ವೆ ಪರ 46 ಟೆಸ್ಟ್ ಮತ್ತು 147 ಏಕದಿನ ಪಂದ್ಯಗಳನ್ನಾಡಿದ್ದಾರೆ. ಬ್ಯಾಟಿಂಗ್ ಆಲ್ರೌಂಡರ್ ಆಗಿದ್ದ ಇವರು ಟೆಸ್ಟ್ನಲ್ಲಿ 2207 ರನ್, ಏಕದಿನದಲ್ಲಿ 2705 ರನ್ ಬಾರಿಸಿದ್ದಾರೆ. ಟೆಸ್ಟ್ನಲ್ಲಿ 4 ಶತಕ ಕೂಡ ಬಾರಿಸಿದ್ದಾರೆ. ಬೌಲಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಇವರು, ಟೆಸ್ಟ್ನಲ್ಲಿ 51 ಮತ್ತು ಏಕದಿನದಲ್ಲಿ 88 ವಿಕೆಟ್ ಕಿತ್ತಿದ್ದಾರೆ.