Site icon Vistara News

Team India | ನಮ್ಮ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಡಿ, ಬಿಸಿಸಿಐಗೆ ಅನಿಲ್‌ ಕುಂಬ್ಳೆ ಸಲಹೆ

IPL2023

ಮುಂಬಯಿ : ಟಿ೨೦ ವಿಶ್ವ ಕಪ್‌ ಗೆಲ್ಲುವ ಭಾರತ ತಂಡದ (Team India) ಆಸೆ ಇಂಗ್ಲೆಂಡ್‌ ವಿರುದ್ಧದ ಸೋಲಿನೊಂದಿಗೆ ಕೊನೆಗೊಂಡಿರುವ ಬೆನ್ನಲ್ಲೇ ಟೀಮ್‌ ಇಂಡಿಯಾದ ಭವಿಷ್ಯದ ಬಗ್ಗೆ ನಾನಾ ಬಗೆಯ ಚರ್ಚೆಗಳು ಶುರುವಾಗಿವೆ. ಪ್ರಮುಖವಾಗಿ ವಿದೇಶಿ ಪಿಚ್‌ಗಳಲ್ಲಿ ಭಾರತೀಯ ಆಟಗಾರರು ಯಾಕೆ ಯಶಸ್ಸು ಕಾಣುತ್ತಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ. ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅಂತೆಯೇ ಟೀಮ್‌ ಇಂಡಿಯಾದ ಮಾಜಿ ಆಟಗಾರ ಹಾಗೂ ಕೋಚ್‌ ಅನಿಲ್‌ ಕುಂಬ್ಳೆ ಅವರು ಸುಲಭದ ಮಾರ್ಗವೊಂದನ್ನು ಬಿಸಿಸಿಐಗೆ ಹೇಳಿಕೊಟ್ಟಿದ್ದಾರೆ. ಅದೇನೆಂದರೆ ಭಾರತದ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು.

ಟೀಮ್‌ ಇಂಡಿಯಾದ ಆಟಗಾರರು ಸದ್ಯದ ನಿಯಮದ ಪ್ರಕಾರ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಬಿಗ್‌ಬ್ಯಾಶ್‌ ಲೀಗ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌, ಹೊಸದಾಗಿ ಹುಟ್ಟಿಕೊಂಡಿರುವ ಯುಎಇ ಕ್ರಿಕೆಟ್‌ ಲೀಗ್‌ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಲೀಗ್‌ನಲ್ಲಿ ಆಡುವುದು ಸಾಧ್ಯವಿಲ್ಲ. ಆದರೆ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ ಇಂಡೀಸ್ ಆಟಗಾರರಿಗೆ ಈ ನಿರ್ಬಂಧ ಇಲ್ಲ. ಹೀಗಾಗಿ ಅವರು ನಾನಾ ದೇಶಗಳಿಗೆ ಹೋಗಿ ಆಡಿ ಯಾವುದೇ ಪರಿಸ್ಥಿತಿಯಲ್ಲಿ ಆಡುವ ಅನುಭವ ಪಡೆದುಕೊಳ್ಳುತ್ತಾರೆ. ಇದು ಟಿ೨೦ ವಿಶ್ವ ಕಪ್‌ನಂಥ ಟೂರ್ನಿಗಳಲ್ಲಿ ಉತ್ತಮವಾಗಿ ಆಡಲು ಅವರಿಗೆ ಅವಕಾಶ ನೀಡುತ್ತದೆ. ಅದಕ್ಕೆ ಪ್ರಮುಖ ಉದಾಹರಣೆ ಇಂಗ್ಲೆಂಡ್‌ ತಂಡದ ಜೋಸ್‌ ಬಟ್ಲರ್‌.

ಅದೇ ಮಾದರಿಯಲ್ಲಿ ಭಾರತ ತಂಡದ ಆಟಗಾರರಿಗೂ ವಿದೇಶಿ ಟೂರ್ನಿಗಳಲ್ಲಿ ಆಡುವ ಅವಕಾಶ ಕಲ್ಪಿಸಬೇಕು ಎಂಬುದಾಗಿ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಆಟಗಾರರಿಗೆ ಬೇರೆ ಪ್ರದೇಶಗಳಲ್ಲಿ ಆಡುವ ಅವಕಾಶ ಲಭಿಸುವುದು ಅತ್ಯಗತ್ಯ. ಉದಾಹರಣೆಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಪಡೆಯುವ ವಿದೇಶಿ ಕ್ರಿಕೆಟಿಗರು ಎಂಥ ಪರಿಸ್ಥಿತಿಯಲ್ಲೂ ಆಡುವ ವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಈ ಅನುಕೂಲ ಟೀಮ್‌ ಇಂಡಿಯಾದ ಆಟಗಾರರಿಗೂ ಲಭಿಸಬೇಕು,” ಎಂಬುದಾಗಿ ಅವರು ಹೇಳಿದ್ದಾರೆ.

ಇದೇ ವೇಳೆ ಅವರು ಟೀಮ್‌ ಇಂಡಿಯಾದಲ್ಲಿ ಬ್ಯಾಟಿಂಗ್ ಕ್ರಮಾಂಕದ ವಿಚಾರಕ್ಕೆ ಬಂದಾಗ ಹೆಚ್ಚು ಉದಾರ ನೀತಿ ಇರಬೇಕು. ಅಗತ್ಯಕ್ಕೆ ತಕ್ಕಂತೆ ಕ್ರಮಾಂಕ ಬದಲಿಸಬೇಕು ಎಂಬುದಾಗಿಯೂ ಅವರು ಹೇಳಿದ್ದಾರೆ.

ಇದನ್ನೂ ಓದಿ | Virat Kohli | ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್​ ಕೊಹ್ಲಿ; ಏನಿದು ನೂತನ ರೆಕಾರ್ಡ್‌?

Exit mobile version