ಬೀಜಿಂಗ್: ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಅವರು ಮತ್ತೆ ತಮ್ಮ ನಿವೃತ್ತಿಯ ಸುಳಿವು ನೀಡಿದ್ದು, 2026 ಫಿಫಾ ವಿಶ್ವ ಕಪ್(2026 Fifa World Cup) ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚೀನಾದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಸ್ಸಿ, ಕಳೆದ ವರ್ಷ ಕತಾರ್‌ನಲ್ಲಿ(Qatar) ಆಡಿದ ವಿಶ್ವಕಪ್ ನನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್ ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ವಿಶ್ವಕಪ್ಗೂ ಮುನ್ನ ನಿವೃತ್ತಿ ಘೋಷಿಸುವ ಸೂಚನೆಯನ್ನು ನೀಡಿದ್ದಾರೆ.
ಕತಾರ್ ಫಿಫಾ ವಿಶ್ವಕಪ್ ಬಳಿಕ ನಿವೃತ್ತಿ ನೀಡುವುದಾಗಿ ಮೆಸ್ಸಿ ಘೋಷಿಸಿದ್ದರು. ಆದರೆ ವಿಶ್ವ ಕಪ್ ಗೆದ್ದ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಸದ್ಯ ನಿವೃತ್ತಿಯಾಗುವ ಯೋಚನೆ ನನ್ನ ಮುಂದಿಲ್ಲ, ಆರ್ಜೆಂಟೀನಾ ಪರ ಒಬ್ಬ ಚಾಂಪಿಯನ್ ಆಟಗಾರನಂತೆ ಇನ್ನೂ ಆಟ ಮುಂದುವರಿಸುವ ಯೋಚನೆ ನನ್ನ ಮುಂದಿದೆ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯನ್ನು ಮುಂದೂಡಿದ್ದರು.
ಫಿಫಾ ವಿಶ್ವ ಕಪ್ ಗೆದ್ದ ಕೆಲ ದಿನಗಳ ಬಳಿಕ ಗೋಲ್ ಟಾಟ್ ಕಾಮ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಮೆಸ್ಸಿ, “ಫುಟ್ಬಾಲ್ ಆರಂಭಿಸಿದಾಗ ನಾನು ಈ ಮಟ್ಟದ ಸಾಧನೆ ತೋರುತ್ತೇನೆ ಎಂದು ನಾನು ಊಹಿಸಿರಲಿಲ್ಲ. ಫುಟ್ಬಾಲ್ ವೃತ್ತಿಜೀವನದಲ್ಲಿದ್ದ ಒಂದೇ ಕೊರಗು ವಿಶ್ವ ಕಪ್ ಗೆಲ್ಲುವುದಾಗಿತ್ತು. ಇದೂ ಕೂಡ ನೆರವೇರಿದೆ. ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿಯೂ ಕಪ್ ಗೆದ್ದಿರುವ ನನಗೆ ಇನ್ನೇನು ಆಸೆಗಳು ಉಳಿದಿಲ್ಲ” ಎಂದು ಹೇಳಿದ್ದರು. ಇದೀಗ ಮತ್ತೆ ಈ ಮಾತನ್ನೇ ಪುನರುಚ್ಚರಿಸಿದ್ದಾರೆ.
ಇತ್ತೀಚೆಗಷ್ಟೇ ಫ್ರಾನ್ಸ್‌ನ ಪ್ಯಾರಿಸ್ ಸೈಂಟ್ ಜರ್ಮೈನ್ (PSG) ಫುಟ್ಬಾಲ್ ಕ್ಲಬ್ನಿಂದ ಹೊರ ಬಂದಿರುವ ಮೆಸ್ಸಿ, ಅಮೆರಿಕದ ಮಿಯಾಮಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ವಾರ ಸೌಹಾರ್ದ ಪಂದ್ಯಕ್ಕಾಗಿ ಬೀಜಿಂಗ್ಗೆ ಆಗಮಿಸಿದ್ದ ಮೆಸ್ಸಿ ಅವರನ್ನು ವೀಸಾ ಸಮಸ್ಯೆಯಿಂದಾಗಿ ಗಡಿ ಭದ್ರತಾ ಪಡೆಯ ಯೋಧರು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ವೀಸಾ ಕ್ಲಿಯರೆನ್ಸ್ ಸಿಕ್ಕ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ Lionel Messi: ಮೆಸ್ಸಿಯನ್ನು ಬಂಧಿಸಿದ ಚೀನಾ ಪೊಲೀಸರು; ವಿಡಿಯೊ ವೈರಲ್
ಆಸ್ಟ್ರೇಲಿಯಾ ವಿರುದ್ಧದ ಸೌಹಾರ್ದ ಪಂದ್ಯದ ಬಳಿಕ ಮಾತನಾಡಿದ ಮೆಸ್ಸಿ, ಅಮೆರಿಕ, ಮೆಕ್ಸಿಕೋ, ಕೆನಡಾದಲ್ಲಿ ನಡೆಯಲಿರುವ ಮುಂದಿನ ಫಿಫಾ ವಿಶ್ವಕಪ್ನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕತಾರ್ ವಿಶ್ವಕಪ್ನಲ್ಲಿ ಮೆಸ್ಸಿ ಅದ್ಭುತ ಪ್ರದರ್ಶನ ತೋರುವ ಮೂಲಕ 1986ರ ಬಳಿಕ ಅರ್ಜೆಂಟೀನಾಗೆ ಪ್ರಶಸ್ತಿ ತಂದುಕೊಟ್ಟಿದ್ದರು. ಜತೆಗೆ ಟೂರ್ನಿಯಲ್ಲಿ ಒಟ್ಟು 7 ಗೋಲು ಗಳಿಸಿದ್ದರು.