ಪ್ಯಾರಿಸ್: ಅರ್ಜೆಂಟೀನಾ ವಿಶ್ವ ಕಪ್ ವಿಜೇತ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಅವರು ಅಮೆರಿಕದ ಇಂಟರ್ ಮಿಯಾಮಿ ಕ್ಲಬ್(Inter Miami) ಸೇರುವುದು ಬಹುತೇಕ ಖಚಿತವಾಗಿದೆ. ಮೆಸ್ಸಿ ಅವರ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ಜತೆಗಿನ ಒಪ್ಪಂದ ಇದೇ ತಿಂಗಳು ಮುಗಿಯಲಿದೆ. ಆ ಬಳಿಕ ಮೆಸ್ಸಿ ಇಂಟರ್ ಮಿಯಾಮಿ ಪರ ಆಡಲಿದ್ದಾರೆ ಎಂದು ವರದಿಯಾಗಿದೆ.
ಮೆಸ್ಸಿ ಅವರ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ಜತೆಗಿನ ಒಪ್ಪಂದ ಮುಗಿಯುವ ವಿಚಾರ ತಿಳಿದ ಕೂಡಲೇ ಅವರಿಗೆ ತಮ್ಮ ಮಾಜಿ ತಂಡವಾದ ಬಾರ್ಸಿಲೋನಾ(Barcelona) ಮತ್ತು ಸೌದಿ ಅರೆಬಿಯಾದ(Saudi Arabia) ಹಲವು ಕ್ಲಬ್ಗಳಿಂದ ದೊಡ್ಡ ಮಟ್ಟದ ಆಫರ್ ಬಂದಿದ್ದವು ಎನ್ನಲಾಗಿದೆ. ಆದರೆ ಮೆಸ್ಸಿ ಅವರು ಈ ಎಲ್ಲ ಆಫರ್ಗಳನ್ನು ತಿರಸ್ಕರಿಸಿ ಅಮೆರಿಕದ ಇಂಟರ್ ಮಿಯಾಮಿ ಕ್ಲಬ್ ಸೇರಲಿದ್ದಾರೆ ಎಂದು ವರದಿಯಾಗಿದೆ. ಇನ್ನೊಂದು ಮೂಲಕಗಳ ಪ್ರಕಾರ ಮೆಸ್ಸಿ ಅವರು ಈಗಾಗಲೇ ಮಿಯಾಮಿ ಕ್ಲಬ್ ಜತೆಗೆ 4 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು ವಾರ್ಷಿಕ 54 ಮಿಲಿಯನ್ ಡಾಲರ್ ನೀಡಲು ಕ್ಲಬ್ ಒಪ್ಪಿಕೊಂಡಿದೆ ಎನ್ನಲಾಗಿದೆ. ಆದರೆ ಅಧಿಕೃತ ಪ್ರಕಟಣೆ ಹೊರಡಿಸುವುದೊಂದೆ ಬಾಕಿ ಉಳಿದಿದೆ.
ಇದನ್ನೂ ಓದಿ Lionel Messi: ಸೌದಿ ಅರೇಬಿಯಾ ಕ್ಲಬ್ ಸೇರಲಿದ್ದಾರೆ ಲಿಯೋನೆಲ್ ಮೆಸ್ಸಿ!
ಕಳೆದ ವಾರ ಬಾರ್ಸಿಲೋನಾ ಕ್ಲಬ್ ಅಧ್ಯಕ್ಷ ಜೋನ್ ಲಾಪೊರ್ಟ(Joan Laporta) ಅವರು “ನಾವು ಮೆಸ್ಸಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಗರಿಷ್ಠ ಪ್ರಯತ್ನ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದರು. ಆದರೆ ಬಾರ್ಸಿಲೋನಾ ತಂಡದಲ್ಲಿ ಇರುವ ಬೇರೊಬ್ಬ ಆಟಗಾರನನ್ನು ಮಾರಾಟ ಮಾಡಿದರಷ್ಟೇ ಮೆಸ್ಸಿ ಪ್ರವೇಶ ಸಾಧ್ಯ ಎನ್ನುವ ಮಾತುಗಳು ಕೇಳಿಬಂದಿತ್ತು. ಸದ್ಯದ ಮಾಹಿತಿ ಪ್ರಕಾರ ಮೆಸ್ಸಿ ಇಂಟರ್ ಮಿಯಾಮಿ ಕ್ಲಬ್ ಸೇರುವುದು ಬಹುತೇಕ ಖಚಿತ ಎಂಬಂತಿದೆ.